ಬೆಂಗಳೂರು: ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಬೆಂಗಳೂರು ಶಾಖಾ ಕಚೇರಿಯ ಅಧಿಕಾರಿಗಳು, ಬ್ರಿಗೇಡ್ ಟವರ್‌ನಲ್ಲಿರುವ ‘ಸೆಲ್‌ಬ್ರೈಟ್ ಡಿಜಿಟಲ್ ಎಲ್‌ಎಲ್‌ಪಿ’ ಮೇಲೆ ಕಾರ್ಯಾಚರಣೆ ನಡೆಸಿ 42 ಲಕ್ಷ ರೂ.ಮೌಲ್ಯದ ಲ್ಯಾಪೆಲ್ ಮೈಕ್ರೋಫೋನ್ ವಶಪಡಿಸಿಕೊಂಡಿದ್ದಾರೆ.
ಬಿಐಎಸ್ ಜಂಟಿ ನಿರ್ದೇಶಕರಾದ ಪಿ.ಜಯಚಂದ್ರಬಾಬು, ವಿಜಯಕುಮಾರ್, ಉಪ ನಿರ್ದೇಶಕ ಮನೀಶ್‌ರಾಜ್ ಮತ್ತು ಸಹ ನಿರ್ದೇಶಕ ಪಿಯೂಷ್ ಕುಮಾರ್ ಗುಪ್ತ ಸೇರಿ ಇತರ ಅಧಿಕಾರಿಗಳು ಕಾರ್ಯಾಚರಣೆ ಅಭಿಯಾನದಲ್ಲಿ ತೊಡಗಿದ್ದರು. ಬಿಐಎಸ್ ಕಾಯ್ದೆ ಉಲ್ಲಂಸಿ ಹಿನ್ನೆಲೆಯಲ್ಲಿ ಕಂಪನಿ ಮೇಲೆ ದಾಳಿ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ.
ಬಿಐಎಸ್ ಹಾಲ್‌ಮಾರ್ಕ್ ಮತ್ತು ಐಎಸ್‌ಐ ಗುರುತು ಇಲ್ಲದ ಉತ್ಪನ್ನ ಮಾರಾಟ ಮಾಡುತ್ತಿರುವ ಬಗ್ಗೆ ಇ-ಮೇಲ್, ಪತ್ರ ಅಥವಾ ‘ಬಿಐಎಸ್ ಕೇರ್ ಮೊಬೈಲ್ ಆ್ಯಪ್’ ಮೂಲಕ ದೂರು ನೀಡಬಹುದು. ಯಾವುದೇ ತಯಾರಿಕಾ ಕಂಪನಿಗಳು ಕಡ್ಡಾಯವಾಗಿ ಬಿಐಎಸ್ ಪರವಾನಗಿ ಪಡೆದು ಉತ್ಪನ್ನ ತಯಾರಿಸಬೇಕು. ಪ್ರಯೋಗಾಲಯದಲ್ಲಿ ಕಳಪೆ ಅಥವಾ ಅಸುರಕ್ಷಿತ ವರದಿ ಬಂದರೆ ದಂಡ ವಿಧಿಸಲಾಗುವುದು. ನಕಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡಿ ಸಿಕ್ಕಿ ಬಿದ್ದರೆ ದಂಡ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸಬೇಕು ಎಂದು ಬಿಐಎಸ್ ಅಧಿಕಾರಿಗಳು ಹೇಳಿದ್ದಾರೆ.