ಆರ್ಥಿಕ ಶಕ್ತಿಶಾಲಿ ದೇಶವಾಗಿ ಭಾರತ-economic

ಮಾಜಿ ಸಿಎಂ ಡಿ.ವಿ.ಸದಾನಂದಗೌಡ
ಮಾಜಿ ಸಿಎಂ ಡಿ.ವಿ.ಸದಾನಂದಗೌಡ
Published on
ಬೆಂಗಳೂರು: ಆರ್ಥಿಕ ವಲಯದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದ್ದು, ಉತ್ಪಾದನೆ ಮತ್ತು ರಫ್ತಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಆಯೋಜಿಸಿರುವ ‘ಉದ್ಯಮಿ ಒಕ್ಕಲಿಗ ಎಕ್ಸ್‌ಪೋ-2026’ ಕಾರ್ಯಕ್ರಮದ 2ನೇ ದಿನವಾದ ಶನಿವಾರ ಅವರು ಮಾತನಾಡಿದರು.
‘ಮೇಕ್ ಇನ್ ಇಂಡಿಯಾ’ ಯೋಜನೆಯಿಂದ ಜಗತ್ತಿನಲ್ಲಿ ನಮ್ಮ ದೇಶ, ಹೊಸ ಶಕ್ತಿಯಾಗಿ ಹೊರಹೊಮ್ಮಿದೆ. ಯಾವುದೇ ಯೋಜನೆ ಘೋಷಿಸಿದ ನಂತರ ಅದನ್ನು ಅನುಷ್ಠಾನಗೊಳಿಸಲು ಸರ್ಕಾರಗಳು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಭಿವೃದ್ಧಿ ಹೊಂದಿದ ರಾಷ್ಟ್ರದ ಕಲ್ಪನೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸೌರವಿದ್ಯುತ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯಾಗಿದೆ. ಔಷಧ ಉದ್ಯಮದಲ್ಲಿ ಭಾರತ ಹೊಸ ಪಾರುಪಾತ್ಯ ಸಾಧಿಸಿದೆ. ಹೊಸ ಉದ್ದಿಮೆದಾರರಿಗೆ ಕೌಶಲಭರಿತ ಶಿಕ್ಷಣ ನೀಡಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.
ಫಸ್ಟ್ ಸರ್ಕಲ್ ಸಂಸ್ಥಾಪಕ ಜಯರಾಮ್ ರಾಯಪುರ ಮಾತನಾಡಿ, ಆಹಾರ-ಆತಿಥ್ಯ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ.ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು.ಬೆಂಗಳೂರು ಸುತ್ತಮುತ್ತ ಹೋಂಸ್ಟೇ, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಉದ್ಯಮಿ ಸಿದ್ದಾರ್ಥ್ ಪ್ರಾರಂಭಿಸಿದ ‘ಕಾಫಿ ಡೇ’ ಪಾನೀಯ ಉದ್ಯಮಕ್ಕೆ ಮಾದರಿಯಾಗಿದೆ. ಕೊಡಗು, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಹಚ್ಚಿನ ಅವಕಾಶಗಳಿವೆ. ಸಾರಿಗೆ ವ್ಯವಸ್ಥೆಗಳು ಸುಧಾರಿಸಿವೆ. ದೊಡ್ಡ ಮಟ್ಟದಲ್ಲಿ ಈ ಉದ್ಯಮವನ್ನು ಮಾಡಬಹುದಾಗಿದೆ ಎಂದರು.
ಬೆಳಗ್ಗೆಯಿಂದ ಸಂಜೆವರೆಗೆ ನಡೆದ ವಿವಿಧ ಸಂವಾದದಲ್ಲಿ ಅಹಾರ-ಆತಿಥ್ಯ, ಆಧುನಿಕ ಕೃಷಿ, ಶಿಕ್ಷಣ ಮತ್ತು ಎಂಎಸ್‌ಎಂಇ ವಲಯ ಸೇರಿ ಇತರ ವಿಚಾರಗಳ ಕುರಿತು ತಜ್ಞರು ಮಾತನಾಡಿದರು. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಫಸ್ಟ್ ಸರ್ಕಲ್ ಅಧ್ಯಕ್ಷ ಮುನಿರಾಜು ನೂರಾರು ಉದ್ಯಮಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net