ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಸಲ್ಲಿಸಲು ಗುತ್ತಿಗೆದಾರರು ಸಜ್ಜು- Contractor

ರಾಜ್ಯ ಗುತ್ತಿಗೆದಾರರ ಸಂಘ
ರಾಜ್ಯ ಗುತ್ತಿಗೆದಾರರ ಸಂಘ
Published on
ಬೆಂಗಳೂರು: ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಸೇರಿ ಇತರ ಸಮಸ್ಯೆಗಳನ್ನು ಡಿಸೆಂಬರ್‌ನೊಳಗೆ ಬಗೆಹರಿಸುವಂತೆ ರಾಜ್ಯ ಗುತ್ತಿಗೆದಾರರ ಸಂಘ, ಸರ್ಕಾರಕ್ಕೆ ಕೊಟ್ಟಿರುವ ಡೈಡ್‌ಲೈನ್ ಮುಕ್ತಾಯವಾಗಿದೆ.
2025ರ ಅ.17ರಂದು ಸರ್ಕಾರಕ್ಕೆ ಗುಡುವು ಕೊಟ್ಟಿದ್ದ ಸಂಘದ ಪದಾಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ 32 ಸಾವಿರ ಕೋಟಿ ರೂ.ಬಿಲ್‌ಗಳಿಗೆ ಡಿಸೆಂಬರ್‌ನೊಳಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ಸಮಸ್ಯೆ ಬಗೆಹರಿಯದ ಕಾರಣ, ರಾಜ್ಯಪಾಲರಿಗೆ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಸಾಕ್ಷಿ ಸಮೇತ ದೂರು ನೀಡಲು ಸಿದ್ಧತೆ ಮಾಡಿಕೊಂಡಿದೆ.
ಭ್ರಷ್ಟಾಚಾರದ ರಿಪೋರ್ಟ್ ಕಾರ್ಡ್ ಬಿಡುಗಡೆಗೂ ತಯಾರಿ ನಡೆಸಿದ್ದಾರೆ. ಜಲಸಂಪನ್ಮೂಲ, ಲೋಕೋಪಯೋಗಿ, ಆರ್‌ಡಿಪಿಆರ್, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ ಮತ್ತು ಇತರ ಇಲಾಖೆ ಸೇರಿ ಒಟ್ಟು 33 ಸಾವಿರ ಕೋಟಿ ರೂ.ಬಿಲ್‌ಗಳು ಬಾಕಿ ಉಳಿದಿವೆ. ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡುವುದು ಸೇರಿ ಇತರ ಸಮಸ್ಯೆ ಕುರಿತು ಎರಡೂವರೆ ವರ್ಷಗಳಿಂದ ಸಂಘ, ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿತ್ತು. ಐದಾರು ಬಾರಿ ಗುತ್ತಿಗೆದಾರರ ಜೊತೆ ಸಿಎಂ ಸಭೆ ನಡೆಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ದೂರು ನೀಡಲು ಸಜ್ಜಾಗಿದ್ದಾರೆ.
ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಸಂಬಂಧಪಟ್ಟ ಇಲಾಖೆಗಳ ಸಚಿವರನ್ನು ಮತ್ತು ಸರ್ಕಾರದ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಹಣ ಬಿಡುಗಡೆಗೆ ಹಲವು ಬಾರಿ ಚರ್ಚಿಸಿದ್ದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಯಾವುದೇ ಜೇಷ್ಠತೆ ಮತ್ತು ಪಾರದರ್ಶಕತೆ ಕಾಯ್ದೆ ಉಲ್ಲಂಘಿಸಿ, ಅವರವರ ಅನುಕೂಲಕ್ಕೆ ತಕ್ಕಂತೆ ಫಾರ್ಮಲಾ ರೂಪಿಸಿ ಬೇಕಾದವರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಹಿಂದಿನ ಸರ್ಕಾರವು ಪ್ಯಾಕೇಜ್ ಟೆಂಡರ್, ಕಮಿಷನ್ ದಂಧೆಗೆ ಬಲಿಯಾಗಿತ್ತು. ಈಗಿನ ಸರ್ಕಾರ ಅದಕ್ಕೆ ಆಸ್ಪದ ನೀಡಬಾರದು ಎಂದರು.
ಯಾರು ಎಷ್ಟು ಕಮಿಷನ್ ಪಡೆಯುತ್ತಿರುವ ಬಗ್ಗೆ ಬಹಿರಂಗಪಡಿಸುವ ಜೊತೆಗೆ ಸರ್ಕಾರದ ಭ್ರಷ್ಟಾಚಾರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತೇವೆ. ರಾಜ್ಯದಲ್ಲಿ ಹೊರ ರಾಜ್ಯದ ಗುತ್ತಿಗೆದಾರರೇ ತುಂಬಿ ತುಳುಕುತ್ತಿದ್ದಾರೆ. ಬ್ಯಾಂಕಿನಲ್ಲಿ ಚಿನ್ನಾಭರಣ ಅಡ ಇಟ್ಟು ಕಾಮಗಾರಿ ನಿರ್ವಹಿಸಲಾಗಿದೆ. ಹಣ ಬಿಡುಗಡೆ ವಿಳಂಬದಿಂದ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ತೊಂದರೆಯಾಗಿದೆ. ಉದ್ಯೋಗಿಗಳಿಗೆ ವೇತನ ನೀಡಲು ಹಣವಿಲ್ಲ. ಬ್ಯಾಂಕಿನಲ್ಲಿ ಪಡೆದ ಸಾಲಕ್ಕೆ ಬಡ್ಡಿ ಹೆಚ್ಚಳವಾಗುತ್ತಿದೆ. ಹಂತ ಹಂತವಾಗಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
| ಜಿ.ಎಂ.ನಂದಕುಮಾರ್, ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net