ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ವಿರೋಧಿಸಿ ಬೆಂಗಳೂರು ನಗರ, ಕೊಪ್ಪಳ, ಬಿಜಾಪುರ, ಕೋಲಾರ, ಮಂಡ್ಯ ಮತ್ತು ಮೈಸೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿವೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಎಸ್‌ಐಆರ್ ವಿರುದ್ಧ ಕಿಡಿಕಾರಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಕೇಂದ್ರ ಚುನಾವಣಾ ಆಯೋಗವು ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಎಸ್‌ಐಆರ್ ನಡೆಸಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನಡೆಸಲು ಮುಂದಾಗಿದೆ. ಆಯೋಗವು ಕನಿಷ್ಠ 4 ಬದಲಾವಣೆ ಮಾಡಲೇಬೇಕು. ಪ. ಬಂಗಾಳದಲ್ಲಿ ಮಾಡಿದಂತೆ ತಾರ್ಕಿಕ ವ್ಯತ್ಯಾಸ ಬಳಸಿ ಜನರನ್ನು ಹೊರಗಿಡುವ ಕೆಲಸವನ್ನು ಕರ್ನಾಟಕದಲ್ಲಿ ಮಾಡಬಾರದು. ಕರಡು ಪಟ್ಟಿ ತಯಾರಾದ ನಂತರ ಕಡ್ಡಾಯವಾಗಿ ಗ್ರಾಮ ಸಭೆ ಕರೆದು ಸಾರ್ವಜನಿಕ ಪರಿಶೀಲನೆ ನಡೆಸಿ ಪಟ್ಟಿ ಅಂತಿಮಗೊಳಿಸಬೇಕು. ಮತದಾರರ ಪಟ್ಟಿಯನ್ನು ಮೆಷಿನ್ ರೀಡಬಲ್ ಸ್ವರೂಪದಲ್ಲಿ ಕೊಡುವ ಮೂಲಕ ಪಾರದರ್ಶಕತೆ ಪಾಲಿಸಬೇಕು. ಅಗತ್ಯ ದಾಖಲೆ ಒದಗಿಸಲು 6 ತಿಂಗಳ ಸಮಯವಕಾಶ ಒದಗಿಸಬೇಕು. ಈ ಕ್ರಮಗಳಿಗೆ ಒಪ್ಪಿದರೆ ಮಾತ್ರ ರಾಜ್ಯದಲ್ಲಿ ಮತದಾರರ ತೀವ್ರ ಪರಿಷ್ಕರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಮತದಾರರ ಹಿತ ಕಾಯಲು ಸರ್ಕಾರವು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ವಿಶೇಷ ಗ್ರಾಮ ಸಭೆ, ವಾರ್ಡ್ ಸಭೆಗಳನ್ನು ಕರೆದು ಮತದಾರರ ಪಟ್ಟಿಯ ಮುಕ್ತ ಪರಿಶೀಲನೆ ಮಾಡಬೇಕು. ಅರ್ಹ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು. ದಾಖಲೆ ಇಲ್ಲದವರಿಗೆ ದಾಖಲೆ ಒದಗಿಸುವ ಕೆಲಸ ಮಾಡಬೇಕು. 15 ದಿನದೊಳಗೆ ನಮ್ಮ ಆಗ್ರಹಕ್ಕೆ ಚುನಾವಣಾ ಆಯೋಗ ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಮತ್ತು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ಎಸ್‌ಐಆರ್‌ಗೆ ಅಡ್ಡಿ ಪಡಿಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಹೋರಾಟಗಾರರಾದ ನೂರ್ ಶ್ರೀಧರ್, ಕೆ.ವಿ.ಭಟ್, ವಿನಯ್ ಶ್ರೀನಿವಾಸ್, ಅರುಣ್ ಲೂಯಿಸ್ ಸೇರಿ ನೂರಾರು ಜನರು ಉಪಸ್ಥಿತರಿದ್ದರು.