ಮನೆ ಬಾಗಿಲಿಗೆ ತಾಜಾ ಮಾವಿನ ಹಣ್ಣು: ಪಾರ್ಸೆಲ್ ಸೇವೆ ಆರಂಭಿಸಿದ ಅಂಚೆ ಇಲಾಖೆ- Fresh mangoes delivered

ಪಾರ್ಸೆಲ್ ಮೂಲಕ ಮಾವಿನ ಹಣ್ಣು ತಲುಪಿಸುವ ಸೇವೆ
ಪಾರ್ಸೆಲ್ ಮೂಲಕ ಮಾವಿನ ಹಣ್ಣು ತಲುಪಿಸುವ ಸೇವೆ
Published on
ಬೆಂಗಳೂರು:ಹಾಪ್‌ಕಾಮ್ಸ್ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ, ಪ್ರಸಕ್ತ ಸಾಲಿನಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಪಾರ್ಸೆಲ್ ಮೂಲಕ ಮಾವಿನ ಹಣ್ಣು ತಲುಪಿಸುವ ಸೇವೆ ಆರಂಭಿಸಿದೆ.
ನಗರದ ಜಿಪಿಒ ಮುಖ್ಯ ಅಂಚೆ ಪಾಲಕರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನೆಬಾಗಿಲಿಗೆ ಗುಣಮಟ್ಟದ ಮಾವಿನ ಹಣ್ಣು ತಲುಪಿಸುವ ಯೋಜನೆಗೆ ಕರ್ನಾಟಕ ಅಂಚೆ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಚಾಲನೆ ನೀಡಿದರು.
ಮಾವು ಬೆಳೆಗಾರರೊಂದಿಗೆ ‘ಬುಕ್ ನೌ ಪೇ ಲೇಟರ್’ ಒಪ್ಪಂದದಡಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವ ಜತೆಗೆ ಗ್ರಾಹಕರಿಗೆ ತಾಜಾ ಮಾವಿನ ಹಣ್ಣು ಖರೀದಿಸಲು ಸಹಾಯವಾಗಲಿದೆ. ರೈತರು ಬಾಕ್ಸ್‌ನಲ್ಲಿ ತಲಾ 3 ಕೆಜಿ ಮಾವಿನ ಹಣ್ಣು ಪ್ಯಾಕ್ ಮಾಡುತ್ತಾರೆ. ಇದನ್ನು ಅದೇದಿನ ಅಥವಾ ಮರುದಿನದಂದು ಬುಕಿಂಗ್ ಮಾಡಿರುವ ಗ್ರಾಹಕರಿಗೆ ವಿತರಿಸಲಾಗುವುದು. ಬೆಂಗಳೂರು ನಗರ ಸೇರಿ ದೇಶದ ಆಯ್ದ ಸ್ಥಳಗಳಿಗೆ 24 ಗಂಟೆಯಲ್ಲಿ ಸ್ವೀಡ್ ಸೇವೆಯಡಿ ಹಣ್ಣ ವಿತರಿಸುವ ಸೌಲಭ್ಯವಿದೆ. 2019ರ ಮಾರ್ಚ್‌ನಿಂದ 2025ರ ಜೂನ್‌ವರೆಗೆ 3,81,183 ಕೆಜಿ ಮಾವಿನ ಹಣ್ಣು ಅನ್ನು 1.13 ಲಕ್ಷದ ಪಾರ್ಸೆಲ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದು ಕೆ.ಪ್ರಕಾಶ್ ವಿವರಿಸಿದರು.
ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ ಮಾತನಾಡಿ, ಮೊದಲ ಬಾರಿಗೆ ಹಾಪ್‌ಕಾಮ್ಸ್‌ನಿಂದ ರೈತರ ಅಂಚೆ ಎಂಬ ವಿಶಿಷ್ಟ ಆನ್‌ಲೈನ್ ವ್ಯಾಪಾರ ಸೇವೆ ಪರಿಚಯಿಸಿದ್ದೇವೆ. ಅಂಚೆ ಮೂಲಕ ಮಾವು ಸೇರಿ ಇತರೆ ವಿಶೇಷ ಹಣ್ಣುಗಳನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದಾಗಿದೆ. ನೈಸರ್ಗಿಕವಾಗಿ ಮಾಗಿಸಿದ ಹಣ್ಣನ್ನು 3 ಕೆ.ಜಿ. ಹಾಗೂ 5 ಕೆ.ಜಿ. ಸಾಮರ್ಥ್ಯದ ಬಾಕ್ಸ್‌ಗಳಲ್ಲಿ ಅಂಚೆ ಮೂಲಕ ತರಿಸಿಕೊಳ್ಳಬಹುದು. ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗಳಿಲ್ಲ. ಆದ್ದರಿಂದ, ಗ್ರಾಹಕರಿಗೆ ತಾಜಾ ಹಣ್ಣುಗಳನ್ನು ಒದಗಿಸಲು ಈ ಸೇವೆಯನ್ನು ಆರಂಭಿಸಿದ್ದೇವೆ ಎಂದರು.
ರೇಷ್ಮೆ ಇಲಾಖೆ ಕಾರ್ಯದರ್ಶಿ ಆರ್.ಗಿರೀಶ್, ಬೆಂಗಳೂರು ಮುಖ್ಯಾಲಯ ಕ್ಷೇತ್ರದ ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರಾ, ತೋಟಗಾರಿಕೆ ಇಲಾಖೆ ನಿರ್ದೇಶಕ ಇಬ್ರಾಹಿಂ ಮೈಗೂರ್, ಹಾಪ್‌ಕಾಮ್ಸ್ ಉಪಾಧ್ಯಕ್ಷ ನಾರಾಯಣಗೌಡ ಮತ್ತಿತರರಿದ್ದರು.
ಬುಕ್ ಮಾಡುವುದು ಹೇಗೆ?
Https://hopcomsbengaluru.com ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಹೆಸರು ನೋಂದಾಯಿಸಬೇಕು. ಒಂದು ಬಾರಿ ನೋಂದಾಯಿಸಿದರೆ ಸಾಕು. ಬೇಕಾದ ಹಣ್ಣುಗಳನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ಹಣ ಪಾವತಿಸಿ ಆರ್ಡರ್ ಮಾಡಿದ್ದಲ್ಲಿ 24 ಗಂಟೆಗಳೊಳಗೆ ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net