

ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಭಜನೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಟ್ಟು ಬೇರೆ ಏನನ್ನೂ ರಾಜ್ಯದ ಜನ ನಿರೀಕ್ಷಿಸುವಂತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ಇಂದು ನಗರದ ಜಿಲ್ಲಾ ಕ್ರೀಡಾಂಗಣದ ತಾತ್ಕಾಲಿಕ ಎಲಿಪ್ಯಾಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂ. ಕೊಡುವುದಾಗಿ ಕಳೆದ ಸಾಲಿನಲ್ಲಿ ಹೇಳಿದ್ದಾರೆ. ಈವರೆಗೂ ಐದು ನಯಾ ಪೈಸೆ ಅನುದಾನ ಬಂದಿಲ್ಲ. ಸರ್ಕಾರದ ಖಜಾನೆ ಖಾಲಿ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದ ಕಾರಣ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಗುತ್ತಿಗೆದಾರರು ದಯಾಮರಣ ಕೋರುತ್ತಿದ್ದಾರೆ. ಹಿಂದಿಗಿಂತಲೂ ಕಮಿಷನ್ ದಂಧೆ ಹೆಚ್ಚಾಗಿದೆ. ರಾಜ್ಯದ ಖಜಾನೆ ಹೇಗೆ ಸೀರಿಕೆ ಆಗುತ್ತಿದೆ ಎಂಬುದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವೇ ಸಾಕ್ಷಿ. ತೆರಿಗೆ ಹೆಚ್ಚಳವಾಗಿದೆ. ಖಜನಾ ಭರ್ತಿಗೆ ಜನ ಸಹಕರಿಸುತ್ತಿದ್ದಾರೆ. ಆ ಹಣ ಎಲ್ಲಿ ಹೋಗುತ್ತಿದೆ ? ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಹೇಳಿದ್ದರು ಎಂದರು.
ಬಿಎಸ್ಪಿಎಲ್ ಕಾರ್ಖಾನೆ ವಿರೋಧ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಉಕ್ಕು ಕಾರ್ಖಾನೆ ಸ್ಥಾಪನೆಗೆ ಗವಿಶ್ರೀಗಳು ಹಾಗೂ ಕೊಪ್ಪಳದ ಜನ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸ್ವಾಮೀಜಿ ಹಾಗೂ ಜನರೊಂದಿಗೆ ಚರ್ಚಿಸಬೇಕು. ಸ್ವಾಮೀಜಿಗಳ ಮಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನಾನು 14 ತಿಂಗಳು ಸಿಎಂ ಇದ್ದಾಗ ಕೊಪ್ಪಳಕ್ಕೆ ಆಟಿಕೆ ಕ್ಲಸ್ಟರ್ ನೀಡಿದೆ. ರಾಜ್ಯದ 9 ಕಡೆ ಕೈಗಾರಿಕೆ ಕ್ಲಸ್ಟರ್ ರಚಿಸಿ ಒಂದು ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಗೆ ಗುರಿ ಹಾಕಿಕೊಂಡಿದ್ದೆ. 500 ಕೋಟಿ ರೂ. ಸಬ್ಸಿಡಿಯೂ ನೀಡಿದ್ದೆ ಎಂದು ಹೇಳಿದರು.
ದೇಶದಲ್ಲಿ ಕಬ್ಬಿಣ ಉತ್ಪಾದಿಸುವ ಹಲವು ಕಾರ್ಖಾನೆಗಳಿವೆ. ಕೇಂದ್ರದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಿಂದ ಐದು ಕಾರ್ಖಾನೆಗಳನ್ನು ನಡೆಸಲಾಗುತ್ತಿದೆ. ಅಲ್ಲಿ 30ರಿಂದ 35 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸಲಾಗಿದೆ. ಪರಿಸರಕ್ಕೆ ಪೂರಕವಾಗಿದೆ. ಟೌನ್ ಶಿಪ್ ನಿರ್ಮಾಣ ಆಗಿವೆ. ಪರಿಸರಕ್ಕೆ ಪೂರಕವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಪರಿಸರಕ್ಕೆ ಹಾನಿಯಾಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ಯಾವುದೇ ಸರ್ಕಾರಗಳಿದ್ದರೂ ಜನಸಾಮಾನ್ಯರ ಬದುಕಿನ ಮೇಲೆ ಹಾನಿ ಆಗದಂತೆ ನಿರ್ಣಯ ಕೈಗೊಳ್ಳಬಾರದು ಎಂದರು.
ರಾಜ್ಯದ ಅಭಿವೃದ್ಧಿ ಬಗ್ಗೆ ಯಾರಿಗೂ ಚಿಂತನೆ ಇಲ್ಲ. ರಾಜಕೀಯ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಬಾಣಂತಿಯರ ಸಾವು, ಬೆಳೆ ನಷ್ಟ ಆಗಿದೆ. ಇದರ ಬಗ್ಗೆ ಯಾರೂ ಮಾತನಾಡಲು ಸಿದ್ಧರಿಲ್ಲ. ರೈತರು, ಬಡವರು, ಎಸ್ಸಿ-ಎಸ್ಟಿ ಒಂದೇ ಇಲಾಖೆ ಅಲ್ಲ. ಎಲ್ಲ ಇಲಾಖೆಗಳ ಹಣ ದುರ್ಬಳಕೆ ಆಗುತ್ತಿದೆ. ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ, ಏನೆಲ್ಲ ಆಗುತ್ತದೆ ಎಂಬುದನ್ನು ಕಾಲ ನಿರ್ಧರಿಸಲಿದೆ. ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುತ್ತವೆ ಎಂದು ನುಡಿದರು.