ಟೀಮ್​ ಇಂಡಿಯಾವನ್ನು ಮಣಿಸಲು ರಣತಂತ್ರ ರೂಪಿಸಿದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ! ಏನದು? Champions Trophy

Champions Trophy
Published on

Champions Trophy : ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಹಣಾಹಣಿಯ ಮೇಲೆ ತೀವ್ರ ಕುತೂಹಲ ಕೆರಳಿಸಿದೆ. ಎ ಗುಂಪಿನಿಂದ ಭಾರತ ಮತ್ತು ನ್ಯೂಜಿಲೆಂಡ್ ಹಾಗೂ ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಿವೆ. ಆದಾಗ್ಯೂ, ಸೆಮಿಫೈನಲ್​ನಲ್ಲಿ ಯಾವ ಯಾವ ತಂಡ ಎದುರಾಳಿಗಳಾಗಲಿವೆ ಎಂಬುದು ಮಾತ್ರ ಇನ್ನೂ ದೃಢಪಟ್ಟಿಲ್ಲ.

ಭಾನುವಾರ ನ್ಯೂಜಿಲೆಂಡ್ ಮತ್ತು ಭಾರತ ನಡುವೆ ನಡೆಯುವ ಅಂತಿಮ ಲೀಗ್ ಪಂದ್ಯದ ನಂತರ ಸೆಮಿಫೈನಲ್ ಎದುರಾಳಿಗಳನ್ನು ನಿರ್ಧರಿಸಲಾಗುತ್ತದೆ. ಮಂಗಳವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಆಡುವುದು ಈಗಾಗಲೇ ಖಚಿತವಾಗಿದೆ. ಆದರೆ, ಎದುರಾಳಿಗಳು ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ಆಗಿರುತ್ತಾರೆಯೇ ಎಂಬುದು ಇಂದು ನಿರ್ಧರಿಸಬೇಕಿದೆ.

ಚಾಂಪಿಯನ್ಸ್ ಟ್ರೋಫಿ 'ಬಿ' ಗುಂಪಿನಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸದ್ಯಕ್ಕ ದುಬೈಗೆ ತೆರಳಿದ್ದು, ಟೀಮ್​ ಇಂಡಿಯಾ ವಿರುದ್ಧ ರಣತಂತ್ರ ರೂಪಿಸುತ್ತಿವೆ. ಟೂರ್ನಿಯ ಆರಂಭದಿಂದಲೂ ಭಾರತ ದುಬೈನಲ್ಲಿ ಆಡುತ್ತಿದ್ದು, ಅದರ ಲಾಭವನ್ನು ಪಡೆದುಕೊಳ್ಳುತ್ತಿದೆ ಎಂದು ಕೆಲವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಹೀಗಾಗಿ ದುಬೈ ಕ್ರೀಡಾಂಗಣದ ಪರಿಸ್ಥಿತಿಯನ್ನು ತಿಳಿಯಲು ಆಸಿಸ್​ ಮತ್ತು ಹರಿಣ ಪಡೆ ದುಬೈನಲ್ಲಿ ಬೀಡುಬಿಟ್ಟಿದ್ದು, ಕಠಿಣ ತಾಲೀಮು ನಡೆಸುತ್ತಿವೆ.

ಇನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡು ತಂಡಗಳಲ್ಲಿ ಒಂದು ತಂಡ ಮೈದಾನಕ್ಕಿಳಿಯದೇ ಲಾಹೋರ್‌ಗೆ ಹಿಂತಿರುಗಬೇಕಾಗುತ್ತದೆ. ಏಕೆಂದರೆ, ಭಾರತ ಕಿವೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದರೆ, ರೋಹಿತ್ ಪಡೆ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಮೊದಲ ಸೆಮಿಫೈನಲ್ ಆಡಲಿದೆ. ಇದು ಸಂಭವಿಸಿದಲ್ಲಿ, ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನಕ್ಕೆ ಮರಳಲಿದೆ.

ಅದೇ ರೀತಿ ಭಾರತ ಏನಾದರೂ ಕಿವೀಸ್ ವಿರುದ್ಧ ಸೋತರೆ, ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಹೀಗಾದಲ್ಲಿ, ಕಾಂಗರೂಗಳು ಎರಡನೇ ಸೆಮಿಫೈನಲ್‌ಗಾಗಿ ಪಾಕಿಸ್ತಾನಕ್ಕೆ ಹಿಂತಿರುಗಲಿದ್ದಾರೆ. ನಿರ್ಣಾಯಕ ಸೆಮಿಫೈನಲ್‌ಗೆ ಮೊದಲು ದುಬೈ ಮೈದಾನದಲ್ಲಿ ಅಭ್ಯಾಸ ಮಾಡಲು ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಇದು ಉಪಯುಕ್ತವಾಗಿರುತ್ತದೆ.

ಕಿವೀಸ್ ವಿರುದ್ಧದ ಅಂತಿಮ ಲೀಗ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತದ ನಾಯಕ ರೋಹಿತ್ ಶರ್ಮ ಸಂಪೂರ್ಣ ಫಿಟ್ನೆಸ್ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net