

ಬೆಂಗಳೂರು: ನಿನ್ನೆ (ಮಾ.01) ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ವೇದಿಕೆಯಲ್ಲಿ ಚಿತ್ರರಂಗದವರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಪ್ರಮುಖ ಕಲಾವಿದರು ಹಾಜರಿದ್ದನ್ನು ಕಂಡು ಇತರೆ ಕಲಾವಿದರ ವಿರುದ್ಧ ನೇರವಾಗಿ ವೇದಿಕೆಯಲ್ಲೇ ಗುಡುಗಿದರು. ಸದ್ಯ ಈ ವಿಚಾರಕ್ಕೆ ಡಿಕೆಶಿ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ ತೀವ್ರ ಕಿಡಿಕಾರಿದ್ದಾರೆ.
ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ. ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು.
ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜತೆ ಬೇಕಾದರೂ ಗುರುತಿಸಿಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ. ಕಲಾವಿದರು ನಿಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲ. ನಿಮ್ಮ ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಕಿಡಿಕಾರಿದ್ದಾರೆ.
ನಿನ್ನೆ (ಮಾ.01) ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಚಿತ್ರರಂಗದ ಕೆಲವು ಕಲಾವಿದರ ವಿರುದ್ಧ ಗುಡುಗಿದ ಡಿಸಿಎಂ ಡಿಕೆ. ಶಿವಕುಮಾರ್, ಈ ಕಾರ್ಯಕ್ರಮವು ಇಲ್ಲಿ ವೇದಿಕೆ ಮೇಲಿರುವ ಕೆಲವು ಕಲಾವಿದರು ಹಾಗೂ ರಾಜಕಾರಣಿಗಳ ಮನೆ ಕಾರ್ಯಕ್ರಮವಲ್ಲ. ಚಿತ್ರರಂಗದ ಕಾರ್ಯಕ್ರಮ. ಕೆಲವೇ ಕೆಲವು ಪ್ರಮುಖರು ಮಾತ್ರ ಹಾಜರಿದ್ದಾರೆ. ಇದು ಕನ್ನಡ ಸಿನಿಮಾ ರಂಗದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರಲ್ಲದೆ ಮತ್ಯಾರು ಬರುತ್ತಾರೆ? ಎಂದು ಕೇಳಿದರು.
“ಮುಂದಿನ ದಿನಗಳಲ್ಲಿಯಾದರೂ ಇಂತಹ ಕಾರ್ಯಕ್ರಮಗಳಿಗೆ ಚಿತ್ರರಂಗದ ಪ್ರಮುಖರು ಆಗಮಿಸಬೇಕು. ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಹೇಗೆ? ಇದನ್ನು ಎಚ್ಚರಿಕೆಯಂತಾದರೂ ಪರಿಗಣಿಸಿ ಅಥವಾ ಮನವಿ ಎಂದಾದರೂ ಪರಿಗಣಿಸಿ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ಸರ್ಕಾರ ಅನುಮತಿ ನೀಡದೆ ಇದ್ದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶವೇ ಸಿಗುವುದಿಲ್ಲ. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಗರಂ ಆಗಿ ನುಡಿದರು.