

ಚೆನ್ನೈ: ಹಿಂದಿ ಹೇರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ನಡೆಸುತ್ತಲೇ ಬಂದಿರುವ ತಮಿಳುನಾಡಿನ ಡಿಎಂಕೆ ಸರ್ಕಾರ, ಅಲ್ಲಿನ ಬಜೆಟ್ನಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರಕ್ಕೆ ಬದಲಿಸಿದೆ. ಈ ಮೂಲಕ ಭಾಷಾ ಸಂಘರ್ಷಕ್ಕೆ ಲಾಂಛನ ಸ್ಪರ್ಶ ಮಾಡಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಪರಭಾಷೆ ಹೇರಿಕೆ ವಿರುದ್ಧದ ಸಮರ ಮುಂದುವರಿಸಿದ್ದಾರೆ.
ತಮಿಳುನಾಡಿನ 2025-26ನೇ ಸಾಲಿನ ಬಜೆಟ್ ಶುಕ್ರವಾರ ಮಂಡನೆ ಆಗಲಿದ್ದು, ಆ ಕುರಿತ ಜಾಹೀರಾತು ತುಣುಕಿನಲ್ಲಿ ಸಾಮಾನ್ಯವಾಗಿ ಬಳಸುವ ಅಧಿಕೃತ ರೂಪಾಯಿ ಚಿಹ್ನೆಯ ಬದಲು ತಮಿಳು ‘ರು’ ಅಕ್ಷರ ಬಳಸಲಾಗಿದೆ. ಇದನ್ನು ಸಿಎಂ ಸ್ಟಾಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಈ ಬದಲಾವಣೆ ದೊಡ್ಡಮಟ್ಟದಲ್ಲಿ ಗಮನ ಸೆಳೆದಿದೆ. ಕಳೆದ ವರ್ಷದ ಇಂಥದ್ದೇ ಪೋಸ್ಟರ್ನಲ್ಲಿ ಎಲ್ಲೆಡೆ ಬಳಸುವಂಥ ರೂಪಾಯಿ ಚಿಹ್ನೆ ಇದ್ದಿತ್ತು. ಈ ವರ್ಷ ಅದರ ಬದಲಾವಣೆ ಆಗಿರುವುದರಿಂದ ಎರಡೂ ವರ್ಷಗಳ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿ, ಈ ವಿಚಾರ ವಿವಾದಕ್ಕೀಡಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರದ ಪ್ರಸ್ತಾಪ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಈಗ ರೂಪಾಯಿಗೆ ತಮಿಳಿನ ಅಕ್ಷರವನ್ನೇ ಬಳಸುವಂಥ ಬದಲಾವಣೆ ಮಾಡಿರುವುದು ಅದು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸುಳಿವು ನೀಡಿದೆ.
ತ್ರಿಭಾಷಾ ಸೂತ್ರದಿಂದ ಭುಗಿಲೆದ್ದ ಸಂಘರ್ಷ: ಕೇಂದ್ರ ಸರ್ಕಾರ ಮತ್ತು ತಮಿಳುನಾಡು ನಡುವಿನ ಭಾಷಾ ಸಂಘರ್ಷ ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದಲೂ ಇರುವ ಈ ಭಾಷಾ ಸಂಘರ್ಷ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ತರಲು ಉದ್ದೇಶಿಸಿದ ಬಳಿಕ ಮತ್ತೆ ಭುಗಿಲೆದ್ದಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾದ ತ್ರಿಭಾಷಾ ಸೂತ್ರದ ಮೂಲಕ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಹೇರಲು ಯತ್ನಿಸುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ಆರೋಪಿಸಿದೆ. ಮಾತ್ರವಲ್ಲ, ಕಳೆದ ಕೆಲವು ದಿನಗಳಿಂದ ಈ ಹಿಂದಿ ಹೇರಿಕೆಯನ್ನು ಪ್ರಸ್ತಾಪಿಸಿ ಸಿಎಂ ಸ್ಟಾಲಿನ್ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಹಿಂದಿ ಹೇರಿಕೆ ಎಂಬ ಸ್ಟಾಲಿನ್ ಹೇಳಿಕೆಗೆ ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿರುಗೇಟು ನೀಡಿದ್ದರು. ರಾಜ್ಯ ಸರ್ಕಾರ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್ಗಳನ್ನು ತಮಿಳಿನಲ್ಲಿ ನಡೆಸಲಿ ಎಂದು ಕೆಲ ದಿನಗಳ ಹಿಂದೆ ಸ್ಟಾಲಿನ್ಗೆ ಅಮಿತ್ ಷಾ ಸವಾಲು ಹಾಕಿದ್ದರು.
ಕಾನೂನುಬಾಹಿರವಲ್ಲ: ‘ಇದರಲ್ಲಿ ಕಾನೂನುಬಾಹಿರವೇನೂ ಇಲ್ಲ. ನಾವು ತಮಿಳಿಗೆ ಆದ್ಯತೆ ನೀಡುತ್ತೇವೆ. ಸರ್ಕಾರ ಅದನ್ನು ಈ ಮೂಲಕ ಮುಂದುವರಿಸಿದೆ’ ಎಂದು ಚಿಹ್ನೆ ಬದಲಾವಣೆ ಕುರಿತಂತೆ ಡಿಎಂಕೆ ನಾಯಕ ಶರವಣನ್ ಅಣ್ಣಾದುರೈ ಸಮಜಾಯಿಷಿ ನೀಡಿದ್ದಾರೆ. ‘ತಮಿಳನ್ನು ಸರಿಯಾಗಿ ಪ್ರಚುರಪಡಿಸಲು ನಾನು ಹೇಳಿದ್ದೇನೆ. ತಮಿಳುನಾಡು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇಲ್ಲಿನ ಜನರು ಉತ್ತರ ಭಾರತಕ್ಕೆ ವಲಸೆ ಹೋಗುತ್ತಿಲ್ಲ, ಬದಲಿಗೆ ಯುಎಸ್-ಯುಕೆಗೆ ಹೋಗುತ್ತಿದ್ದಾರೆ. ಬಿಜೆಪಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಅಣ್ಣಾಮಲೈ ವ್ಯಂಗ್ಯ: ‘ರೂಪಾಯಿ ಚಿಹ್ನೆಯನ್ನು ದೇಶ 2010ರ ಜುಲೈನಲ್ಲಿ ಅಳವಡಿಸಿಕೊಂಡಿದೆ. ಮಾಜಿ ಡಿಎಂಕೆ ಶಾಸಕರೊಬ್ಬರ ಪುತ್ರ ಅದನ್ನು ವಿನ್ಯಾಸಗೊಳಿಸಿದ್ದರು’ ಎಂದಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ‘ನೀವೆಷ್ಟು ಮೂರ್ಖರಾಗಬಹುದು?’ ಎಂದು ಸಿಎಂ ಸ್ಟಾಲಿನ್ ಕಾಲೆಳೆದಿದ್ದಾರೆ. ‘ಇದು ಸಂವಿಧಾನ ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದುದು’ ಎಂದು ಕಿಡಿಕಾರಿರುವ ಮಾಜಿ ರಾಜ್ಯಪಾಲೆ ಹಾಗೂ ಬಿಜೆಪಿ ನಾಯಕಿ ತಮಿಳಿಸೈ ಸೌಂದರಾಜನ್, ‘ಸ್ಟಾಲಿನ್ ತಮ್ಮ ಹೆಸರನ್ನು ಪರ್ಯಾಯ ತಮಿಳು ಪದಕ್ಕೆ ಬದಲಿಸಿಕೊಳ್ಳಲಿ’ ಎಂದು ಸವಾಲೆಸೆದಿದ್ದಾರೆ.
ಡಿಎಂಕೆ ಮಾಜಿ ಶಾಸಕರ ಪುತ್ರ, ಉದಯಕುಮಾರ್ ಧರ್ಮಲಿಂಗಂ ಅವರು ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸಿದ್ದರು. ಅದು ಭಾರತದಿಂದ ಸ್ವೀಕರಿಸಲ್ಪಟ್ಟಿದೆ. ಆದರೆ ಸಿಎಂ ಸ್ಟಾಲಿನ್ ಬಜೆಟ್ ದಾಖಲೆಯಿಂದ ಈ ಚಿಹ್ನೆಯನ್ನು ಬಿಡುವ ಮೂಲಕ ತಮಿಳರನ್ನು ಅವಮಾನಿಸಿದ್ದಾರೆ.
| ಅಮಿತ್ ಮಾಳವೀಯ ಬಿಜೆಪಿ ನಾಯಕ