ಮುಂಬೈ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಮಾರ್ಚ್ 22ರಿಂದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬಳಿಕ ಕ್ರೀಡಾಭಿಮಾನಿಗಳ ಚಿತ್ತ ಐಪಿಎಲ್ನತ್ತ ನೆಟ್ಟಿದ್ಧಾರೆ. ಇದೆಲ್ಲದರ ನಡುವೆ ಐಪಿಎಲ್‌ನಿಂದ ಇಂಗ್ಲೆಂಡ್ನ ಸ್ಟಾರ್ ಕ್ರಿಕೆಟಿಗ ಹ್ಯಾರಿ ಬ್ರೂಕ್ ಹೊರನಡೆದಿದ್ದು, ಅವರನ್ನು ಐಪಿಎಲ್‌ನಿಂದ ಎರಡು ವರ್ಷಗಳ ಕಾಲ ಬಿಸಿಸಿಐ (BCCI) ಬ್ಯಾನ್ ಮಾಡಿದೆ.

2024ರ ನವೆಂಬರ್ ತಿಂಗಳಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಹ್ಯಾರಿ ಬ್ರೂಕ್ ಟೂರ್ನಿ ಆರಂಭವಾಗುವುದಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಹಿಂದೆ ಸರಿದಿದ್ದುಮ ಈ ಕಾರಣಕ್ಕಾಗಿ ಅವರನ್ನು ಐಪಿಎಲ್ನಲ್ಲಿ ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಈ ಸಂಬಂಧ ಬಿಸಿಸಿಐ (BCCI) ಇಸಿಬಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಬ್ರೂಕ್ ಮೇಲಿನ ಎರಡು ವರ್ಷಗಳ ನಿಷೇಧದ ಕುರಿತು ಇಸಿಬಿ ಮತ್ತು ಬ್ರೂಕ್‌ಗೆ ಅಧಿಕೃತ ಮಾಹಿತಿಯನ್ನು ಕಳುಹಿಸಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ನಿಯಮ ಹೇಳುವುದೇನು?
ಐಪಿಎಲ್ಗೆ ರಿಜಿಸ್ಟಾರ್ ಮಾಡಿಕೊಂಡು ಆ ಬಳಿಕ ಯಾವುದಾದರು ತಂಡಕ್ಕೆ ಮಾರಾಟವಾದ ಬಳಿಕ ಟೂರ್ನಿಯಿಂದ ಹಿಂದೆ ಸರಿಯುವ ವಿದೇಶಿ ಆಟಗಾರರ ಮೇಲೆ ಎರಡು ವರ್ಷಗಳ ನಿಷೇಧ ಹೇರಬೇಕೆಂದು ಫ್ರಾಂಚೈಸಿಗಳು ಈ ಹಿಂದೆ ಬಿಸಿಸಿಐಗೆ (BCCI) ಮನವಿ ಸಲ್ಲಿಸಿತ್ತು. ಇದಕ್ಕೆ ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫ್ರಾಂಚೈಸಿಗಳು ಆಗ್ರಹಿಸಿದ್ದವು.
ಗಾಯ ಅಥವಾ ನಿರ್ದಿಷ್ಟ ಕಾರಣದ ಹೊರತಾಗಿ ಯಾವುದೇ ವಿದೇಶಿ ಆಟಗಾರ ಐಪಿಎಲ್‌ನಿಂದ ಹಿಂದೆ ಸರಿದರೆ ಅಂತಹ ಆಟಗಾರನನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ. ಈ ಮೂಲಕ ಹರಾಜಿನಲ್ಲಿ ಆಯ್ಕೆಯಾದ ಆಟಗಾರರು ಇನ್ಮುಂದೆ ಐಪಿಎಲ್ ಆಡುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಐಪಿಎಲ್ ತಂಡಗಳಿಗೆ ಆಯ್ಕೆಯಾಗಿ ಟೂರ್ನಿಯಿಂದ ಹಿಂದೆ ಸರಿದರೆ, ಮುಂದಿನ 2 ವರ್ಷಗಳವರೆಗೆ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಅಲ್ಲದೇ ಇಡೀ ಟೂರ್ನಿಯಿಂದಲೇ 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುತ್ತದೆ. ಹೀಗಾಗಿ ಇನ್ಮುಂದೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಆಟಗಾರರು ವಿನಾಕಾರಣ ಟೂರ್ನಿಯಿಂದ ಹಿಂದೆ ಸರಿದರೆ 2 ವರ್ಷಗಳ ಬ್ಯಾನ್ಗೆ ಒಳಗಾಗಲಿದ್ದಾರೆ.
ಹಿಂದೆ ಸರಿಯಲು ಕಾರಣವೇನು?
ತಮ್ಮ ನಿಲುವಿನ ಕುರಿತು ಮಾತನಾಡಿರುವ ಹ್ಯಾರಿ ಬ್ರೂಕ್, “ನನಗೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದು ಮೊದಲ ಆದ್ಯತೆ. ಮುಂಬರುವ ಐಪಿಎಲ್‌ನಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ಕಡೆಗೂ ತೆಗೆದುಕೊಂಡಿದ್ದೇನೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆ ತಂಡದ ಅಭಿಮಾನಿಗಳಿಗೆ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಈಗ ಇಂಗ್ಲೆಂಡ್ ಕ್ರಿಕೆಟ್‌ಗೆ ನಿಜವಾಗಿಯೂ ಮಹತ್ವದ ಸಮಯ ಮತ್ತು ಮುಂಬರುವ ಸರಣಿಗೆ ತಯಾರಿ ನಡೆಸಲು ನಾನು ಸಂಪೂರ್ಣವಾಗಿ ಬದ್ಧನಾಗಿರಬೇಕು. ಹೀಗಾಗಿಯೇ ಐಪಿಎಲ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ, ಕ್ಷಮಿಸಿ” ಎಂದಿದ್ದಾರೆ.
“ನನಗೀಗ ಬಹಳ ಕಷ್ಟಕರ ಸಮಯ. ನಾನು ತೆಗೆದುಕೊಂಡ ನಿರ್ಧಾರ ಬಹುತೇಕರಿಗೆ ಇಷ್ಟವಾಗಿಲ್ಲ ಅನ್ನೋದು ನನಗೆ ಗೊತ್ತಿದೆ. ಇಲ್ಲಿ ಯಾರಿಗೂ ನಾನು ಅರ್ಥ ಮಾಡಿಸುವ ಪ್ರಯತ್ನಕ್ಕೆ ಮುಂದಾಗಲ್ಲ. ಅದನ್ನು ಅವರೊಂದಿಗೆಯೇ ಬಿಟ್ಟು ಬಿಡುತ್ತೀನಿ. ದೇಶಕ್ಕಾಗಿ ಆಡುವುದು ನನ್ನ ಆದ್ಯತೆ ಮತ್ತು ಪ್ರಾಮುಖ್ಯತೆ” ಎಂದು ಬ್ರೂಕ್ ತಮ್ಮ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ಪರಿಚಯಿಸಿದ Whatsapp; ಈಗಲಾದರೂ ಬೀಳುತ್ತಾ ಸೈಬರ್ ವಂಚನೆಗೆ ಕಡಿವಾಣ!?