ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ: ಸುಪ್ರೀಂ ಕೋರ್ಟ್ ನಿರ್ದೇಶನ

Supreme-Court-of-Sri-Lanka
Published on

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು ಶ್ರೀಲಂಕಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸಂವಿಧಾನ ತಿದ್ದುಪಡಿಯ ಪ್ರಸ್ತಾವನೆಯಲ್ಲಿ ಕಾನೂನು ವ್ಯಾಪ್ತಿಯಿಂದ ರಾಷ್ಟ್ರಪತಿಗೆ ವಿನಾಯಿತಿ ಮತ್ತು ಸಾರ್ವಜನಿಕ ಸಾರ್ವಭೌಮತೆ ಮೀರಿ ಒಂದು ವರ್ಷದ ನಂತರದಲ್ಲಿ ಸಂಸತ್ತನ್ನು ವಿಸರ್ಜಿಸುವ ಅಧಿಕಾರ ಸೇರಿ ಹಲವು ತಿದ್ದುಪಡಿಗಳಿವೆ. ಸರಿಯಾದ ಪರಿಷ್ಕರಣೆ ಆಗಿಲ್ಲ ಎಂದಾದರೆ, ಅದನ್ನು ಜನಮತಕ್ಕೆ ಹಾಕಬೇಕಾದ್ದು ಅವಶ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸದ್ಯದ ಸಂವಿಧಾನದ ಚೌಕಟ್ಟಿನಲ್ಲಿ ರಾಷ್ಟ್ರಪತಿಯವರ ನಡೆಯನ್ನು ಕೋರ್ಟ್​ನಲ್ಲಿ ಪ್ರಶ್ನಿಸುವುದಕ್ಕೆ ಅವಕಾಶವಿದೆ. ಅಲ್ಲದೆ, ರಾಷ್ಟ್ರಪತಿಯವರ ಐದು ವರ್ಷದ ಅವಧಿ ಕೊನೆಗೊಳ್ಳುವುದಕ್ಕೆ ಆರು ತಿಂಗಳು ಇದ್ದಾಗಲಷ್ಟೇ ಸಂಸತ್ತು ವಿಸರ್ಜಿಸುವುದಕ್ಕೆ ಅವಕಾಶವಿದೆ.

ತಿದ್ದುಪಡಿ ಪ್ರಕಾರ, ಸಚಿವ ಸಂಪುಟದ ವಿವಿಧ ಖಾತೆಗಳನ್ನು ತನ್ನ ಬಳಿಯೇ ಇರಿಸಿಕೊಳ್ಳುವ ಅಧಿಕಾರ, ಸಚಿವರ ನೇಮಕ ಮತ್ತು ವಜಾಗೊಳಿಸುವ ಅಧಿಕಾರ, ನ್ಯಾಯಮೂರ್ತಿಗಳ ನೇಮಕ ಮತ್ತು ದೇಶದ ಪ್ರಮುಖ ಸಂಸ್ಥೆಗಳ ಅಧಿಕಾರಿಗಳ ನೇಮಕದ ರಾಷ್ಟ್ರಪತಿಯವರ ಅಧಿಕಾರ ಮುಂದುವರಿಯಲಿದೆ.

ಸಂಸತ್ ಸ್ಪೀಕರ್​ ಮಹಿಂದಾ ಯಪಾ ಅಬೆಯವರ್ದನ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಸಂವಿಧಾನ ತಿದ್ದುಪಡಿ ಕಾರ್ಯ ನಡೆಯಲಿದೆ. ಕೆಲವು ಸೆಕ್ಷನ್​ಗಳ ಪರಿಷ್ಕರಣೆಯನ್ನು ಸಂಸತ್ತಿನಲ್ಲಿ ಬುಧವಾರ ಮತ್ತು ಗುರುವಾರ ಚರ್ಚಿಸಿ ತೀರ್ಮಾನಿಸಲಾಗುವುದು. ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಕನಿಷ್ಠ 150 ಸದಸ್ಯರ ಬೆಂಬಲ ಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net