ಡೇವಿಡ್​ ವಾರ್ನರ್​ಗೆ ತೆಲುಗು ಕಲಿಸಿದ ಶ್ರೀಲೀಲಾ-ನಿತಿನ್​! 'ಪುಷ್ಪರಾಜ್' ಡೈಲಾಗ್​ಗಳೇ ಹಾಸ್ಯ ಚಟಾಕಿ​​ | David Warner

ವಿಜಯವಾಣಿ (77)
Published on

David Warner: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ, ಡ್ಯಾಶಿಂಗ್ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್, ಇದೀಗ ಕ್ರಿಕೆಟ್​ ಜತೆ ಜತೆಗೆ ಭಾರತೀಯ ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟಿದ್ದಾರೆ. ನಮ್ಮ ನೆಲದ ಸಿನಿಮಾಗಳನ್ನು ವೀಕ್ಷಿಸುವ ಹವ್ಯಾಸ ಹೊಂದಿದ್ದ ವಾರ್ನರ್​, ತೆಲುಗಿನಲ್ಲಿ ಅಲ್ಲು ಅರ್ಜುನ್​ ಅಭಿನಯದ 'ಪುಷ್ಪ' ಚಿತ್ರದ ಪುಷ್ಪರಾಜ್ ಪಾತ್ರಕ್ಕೆ ದೊಡ್ಡ ಅಭಿಮಾನಿಯಾಗಿದ್ದಾರೆ. ಐಪಿಎಲ್​ ಪಂದ್ಯಗಳಲ್ಲಿ ಆಗಾಗ್ಗೆ ಅಲ್ಲು ಅರ್ಜುನ್​ರನ್ನು ಅನುಕರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುವ ಡೇವಿಡ್​, ಕಡೆಗೂ ಟಾಲಿವುಡ್​ಗೆ ರಾಬಿನ್​ಹುಡ್​ ಮೂಲಕ ಎಂಟ್ರಿಕೊಟ್ಟಿರುವುದು ಸದ್ಯ ಚಿತ್ರಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.

ತೆಲುಗಿನ ಸ್ಟಾರ್​ ಹೀರೋ ನಿತಿನ್ ಮತ್ತು ಕನ್ನಡತಿ ನಟಿ ಶ್ರೀಲೀಲಾ ಅಭಿನಯದ ಕಾಮಿಡಿ ಚಿತ್ರ ‘ರಾಬಿನ್‌ಹುಡ್‌’ನಲ್ಲಿ ಡೇವಿಡ್​ ವಾರ್ನರ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಇದೀಗ ಅಧಿಕೃತವಾಗಿದ್ದು, ಡೇವಿಡ್​ ಅವರ ಪೋಸ್ಟರ್​ ಅನಾವರಣಗೊಂಡಿದೆ. ಇತ್ತೀಚೆಗಷ್ಟೇ ಚಿತ್ರದ ಪ್ರೀ-ರಿಲೀಸ್ ಈವೆಂಟ್​ ಭರ್ಜರಿಯಾಗಿ ನಡೆದಿದ್ದು, ಈ ವೇದಿಕೆಯಲ್ಲಿ ವಾರ್ನರ್​ ಚಿತ್ರತಂಡದ ಕಲಾವಿದರ ಜತೆಗೆ ಕುಣಿದು ಕುಪ್ಪಳಿಸಿದರು.

ಇದೇ ಮಾ.28ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ 'ರಾಬಿನ್​ಹುಡ್'​ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಶ್ರೀಲೀಲಾ, ನಿತಿನ್ ಮತ್ತು ಡೇವಿಡ್ ವಾರ್ನರ್​, ಯೂಟ್ಯೂಬ್ ವಿಡಿಯೋದಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಈ ವೇಳೆ ವಾರ್ನರ್​ಗೆ ತೆಲುಗು ಕಲಿಸಿಕೊಡುವ ಪ್ರಯತ್ನಕ್ಕೆ ಮುಂದಾದ ಶ್ರೀಲೀಲಾ ಮತ್ತು ನಿತಿನ್​, ಡೇವಿಡ್​ ಮಾತುಗಳ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಚಿತ್ರಪ್ರೇಮಿಗಳ ನಗುವಿಗೂ ಕಾರಣವಾಗಿದೆ.

ಏತನ್ಮಧ್ಯೆ, ಆಂಧ್ರಪ್ರದೇಶದಲ್ಲಿ ರಾಬಿನ್​ಹುಡ್​ ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸಲು ಆಂಧ್ರ ಸರ್ಕಾರ ಅನುಮತಿ ನೀಡಿದೆ. ಒಂದು ವಾರದವರೆಗೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರತಿ ಟಿಕೆಟ್‌ಗೆ 50 ರೂ. ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರತಿ ಟಿಕೆಟ್‌ಗೆ 75 ರೂ.ನಷ್ಟು ಟಿಕೆಟ್ ದರವನ್ನು ಹೆಚ್ಚಿಸಲು ಹಸಿರು ನಿಶಾನೆ ತೋರಿಸಿದೆ. ಇದಕ್ಕೆ ಅನುಗುಣವಾಗಿ ಜಿವೋ ಟಿಕೆಟ್ ಬೆಲೆಯನ್ನು ಬಿಡುಗಡೆಗೊಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net