

Chennai Techie: ಸಾಫ್ಟ್‌ವೇರ್ ಕಂಪನಿ ರಿಪ್ಲಿಂಗ್‌ನ ದೇಶಿ ಸಹ-ಸಂಸ್ಥಾಪಕರಾದ ಪ್ರಸನ್ನ ಶಂಕರ್ ಎಂಬ ಚೆನ್ನೈ ಮೂಲದ ವ್ಯಕ್ತಿ, ತನ್ನ ಪತ್ನಿ ಅನ್ಯ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಮೂಲಕ ತನಗೆ ಮೋಸ ಮಾಡಿದ್ದಾಳೆ ಎಂದು ಜಾಲತಾಣದಲ್ಲಿ ದೊಡ್ಡ ಬರಹದ ಮೂಲಕ ಸಾಕ್ಷ್ಯಗಳನ್ನು ಮುಂದಿಟ್ಟು ಆರೋಪಿಸಿದ್ದಾರೆ. ಹೆಂಡತಿ ದಿವ್ಯಾಳ ಕರ್ಮಕಾಂಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಟೆಕ್ಕಿಯ ಸರಣಿ ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಅನೈತಿಕ ಸಂಬಂಧ ಹೊಂದಿದ್ದಲ್ಲದೇ ಅದನ್ನು ಪ್ರಶ್ನಿಸಿದ್ದಕ್ಕೆ ತನ್ನ ವಿರುದ್ಧವೇ ಅತ್ಯಾಚಾರ ಮತ್ತು ಮಗನನ್ನು ಅಪಹರಣದ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಶಂಕರ್ ದೂರಿದ್ದಾರೆ. ಈ ಕುರಿತು ಸುದೀರ್ಘವಾಗಿ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ನಲ್ಲಿ ಬರೆದುಕೊಂಡಿರುವ ಪ್ರಸನ್ನ ಶಂಕರ್, “2016ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ 10 ಬಿಲಿಯನ್ ಡಾಲರ್ ಕಂಪನಿಯನ್ನು ನಾನು ಸ್ಥಾಪಿಸಿದೆ. 2020ರವರೆಗೆ ಅದರ ಸಿಟಿಓ (ಮುಖ್ಯ ತಂತ್ರಜ್ಞಾನ ಅಧಿಕಾರಿ) ಆಗಿ ಸೇವೆ ಸಲ್ಲಿಸಿದೆ. ಅದಾದ ನಂತರ, 2023ರಲ್ಲಿ, ಕ್ರಿಪ್ಟೋ ಉತ್ಸಾಹಿಗಳಿಗಾಗಿ 0xPPL ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಸ್ಥಾಪಿಸಿದೆ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಪ್ರಸ್ತುತ ಭಾರತದಲ್ಲಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಹೆಂಡತಿಯ ಅಸಲಿ ಮುಖವಾಡವನ್ನು ಕಳಚಿಟ್ಟಿದ್ದೇ ತಡ ಆಕೆ ನನ್ನ ವಿರುದ್ಧವೇ ಇದೀಗ ತಿರುಗಿ ಬಿದ್ದಿದ್ದಾಳೆ. ನಾನು ಅವಳ ಅನೈತಿಕ ಸಂಬಂಧ ಮತ್ತು ಇತರೆ ಮೋಸದ ಕೆಲಸಗಳನ್ನು ಬಯಲಿಗೆಳೆದು, ಆಕೆಯ ಅಸಲಿ ಬಣ್ಣವನ್ನು ಹೊರತಂದೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಚೆನ್ನೈ ಪೊಲೀಸರ ಬಳಿ ಕಿರುಕುಳ, ಚಿತ್ರಹಿಂಸೆ ದೂರು ಸಲ್ಲಿಸಿದ್ದಾಳೆ. ಪತ್ನಿ ದಿವ್ಯ ಶಶಿಧರ್ ಮತ್ತು ಆಕೆಯ ಪ್ರೇಮಿ ಅನೂಪ್ ಕುಟ್ಟಿಶಂಕರನ್ ಮಧ್ಯೆ ಬಹಳ ದಿನಗಳಿಂದ ಅನೈತಿಕ ಸಂಬಂಧವಿದೆ. ಇದಕ್ಕೆ ಸಾಕ್ಷಿಗಳು ದಿವ್ಯ ಮಾಡಿರುವ ಮೆಸೇಜ್ಗಳು. ಪುರಾವೆಯನ್ನು ಮುಂದಿಟ್ಟು ಮಾತನಾಡಬೇಕೆಂದು ಅದರ ಸ್ಕ್ರೀನ್‌ಶಾಟ್‌ಗಳನ್ನು ನಿಮ್ಮ ಮುಂದಿಟ್ಟಿದ್ದೇನೆ ಎಂದು ಎಕ್ಸ್ ಹಾಗೂ ಲಿಂಕ್ಡ್ಇನ್ನಲ್ಲಿ ಪ್ರಸನ್ನ ಹಂಚಿಕೊಂಡಿದ್ದಾರೆ.
ದಿವ್ಯ ಪ್ರಿಯಕರ ಅನೂಪ್ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂಬುದಕ್ಕೆ ಅನೂಪ್ ಪತ್ನಿ ನೀಡಿರುವ ಈ ಸಂದೇಶಗಳೇ ಸಾಕ್ಷಿ. ನನ್ನ ಪತ್ನಿ ಆತನಿಗೆ ಎಕ್ಸ್ಎಲ್ ಸೈಜ್ನ ಕಾಂಡೋಮ್ ತರಲು ಹೇಳಿದ್ದು, ಹೋಟೆಲ್ನಲ್ಲಿ ಒಟ್ಟಿಗೆ ಸೇರಲು ರೂಮ್ ಕೂಡ ಬುಕ್ಕಿಂಗ್ ಮಾಡಿದ್ದಳು. ಇಬ್ಬರ ಹೆಸರಿನಲ್ಲಿ ಬುಕ್ ಆದ ರೂಮ್ ಸಂಖ್ಯೆ ಮತ್ತು ಹೆಸರನ್ನು ದಿವ್ಯ, ಅನೂಪ್ಗೆ ಫೋಟೋ ಸಮೇತ ಕಳುಹಿಸಿದ್ದಳು. ಅದರ ಸಾಕ್ಷಿಯೇ ನಾನಿಲ್ಲಿ ಹಂಚಿಕೊಂಡಿದ್ದೇನೆ ಎಂದು ಪ್ರಸನ್ನ ಹೇಳಿದ್ದಾರೆ.
“ಈ ವಿಷಯ ನನಗೆ ಗೊತ್ತಾದ ಬಳಿಕ ಅನೂಪ್ ಅವರ ಪತ್ನಿ ನನ್ನ ಹೆಂಡತಿ ಮತ್ತು ಅನೂಪ್ ನಡುವಿನ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ನನಗೆ ಕಳುಹಿಸಿದರು. ಇದೆಲ್ಲ ತಿಳಿಯುತ್ತಿದ್ದಂತೆ ನಾವಿಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿದೆವು. ಆ ಕುರಿತು ಜೀವನಾಂಶವಾಗಿ ನಾನೆಷ್ಟು ಹಣ ಕೊಡಬೇಕು ಎಂಬುದನ್ನು ಆಕೆಗೆ ತಿಳಿಸಿದ್ದೆ. ಇದಕ್ಕೆ ತಕರಾರು ತೆಗೆದ ದಿವ್ಯ, ನಾನು ಅವಳನ್ನು ಹೊಡೆದಿದ್ದೇನೆ ಎಂದು ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ನಕಲಿ ದೂರು ದಾಖಲಿಸಿದ್ದಾಳೆ. ಪ್ರಸ್ತುತ ಚೆನ್ನೈ ಪೊಲೀಸರು ನನ್ನನ್ನು ಸೆರೆಹಿಡಿಯಲು ಶೋಧ ಮುಂದುವರಿಸಿದ್ದಾರೆ. ನನ್ನ ಮಗನನ್ನ ಆಕೆಯಿಂದ ಕರೆದುಕೊಂಡು ಬರಲು ಸಹಾಯ ಮಾಡಿದ ಬೆಂಗಳೂರಿನ ಸ್ನೇಹಿತನನ್ನು ವಶಕ್ಕೆ ಪಡೆದು, ಬೆದರಿಕೆ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಬೆಂಗಳೂರಿನ ನನ್ನ ಸ್ನೇಹಿತನ ಮನೆಗೆ ನುಗ್ಗಿ, ಆತನನ್ನು ಠಾಣೆಗೆ ಎಳೆದುಕೊಂಡು ಬಂದಿರುವ ಪೊಲೀಸರು, ನನ್ನ ಬಗ್ಗೆ ಮಾಹಿತಿ ಕೊಡುವಂತೆ ಸ್ನೇಹಿತನಿಗೆ ಬೆದರಿಕೆ ಹಾಕಿದ್ದಾರೆ. ಯಾವುದೇ ಮಾಧ್ಯಮಗಳ ಮುಂದೆ ನಾನು ಏನ್ನನ್ನೂ ಹೇಳಬಾರದು ಎಂದು ಆಮಿಷಯೊಡ್ಡಿರುವ ಪೊಲೀಸರು, ನನ್ನ ಬಳಿ ಹೆಚ್ಚುವರಿ ಹಣವಿದೆ ಎಂಬ ಕಾರಣಕ್ಕೆ 25 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದಾರೆ” ಎಂದು ಶಂಕರ್ ಅಳಲು ತೋಡಿಕೊಂಡಿದ್ದಾರೆ.
“ಇದರೊಟ್ಟಿಗೆ ನಾನು ಅವಳ ಮೇಲೆ ಅತ್ಯಾಚಾರ ಮಾಡಿದ್ದೇನೆ ಎಂದು ಮತ್ತಷ್ಟು ಸುಳ್ಳು ದೂರುಗಳನ್ನು ನೀಡಿದ್ದಾಳೆ. ನಾನು ಅವಳ ನಗ್ನ ವಿಡಿಯೊಗಳನ್ನು ಪ್ರಸಾರ ಮಾಡಿದೆ. ಇತ್ಯಾದಿ ಎಂದು ಈ ಹಿಂದೆ ಸಿಂಗಾಪುರದಲ್ಲಿ ದೂರು ಕೊಟ್ಟಿದ್ದಳು. ಪೊಲೀಸರು ಈ ಆರೋಪಗಳನ್ನು ತನಿಖೆ ಮಾಡಿದರು. ತನಿಖೆಯ ಬಳಿಕ ಅವುಗಳು ಆಧಾರರಹಿತವೆಂದು ಕಂಡುಕೊಂಡ ನಂತರವೇ ನನ್ನನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದರು” ಎಂದು ಶಂಕರ್ ಬರೆದಿದ್ದಾರೆ. ಸದ್ಯ ಶಂಕರ್ ಟ್ವೀಟ್ ವೈರಲ್ ಆಗಿದ್ದೇ ತಡ ದಿವ್ಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೊದಲು ಜೀವನಾಂಶ ಕೇಳುವ ಕಾನೂನು ರದ್ದುಗೊಳಿಸಬೇಕು ಎಂಬ ಕೂಗಗಳು ವ್ಯಾಪಕವಾಗಿ ಸದ್ದು ಮಾಡುತ್ತಿವೆ.
ಪ್ರಸ್ತುತ ಚೆನ್ನೈ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿರುವ ಪ್ರಸನ್ನ ಶಂಕರ್, ತನ್ನ 9 ವರ್ಷದ ಮಗನೊಂದಿಗೆ ಕಾಣದ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆಯೇ ಜಾಲತಾಣದಲ್ಲಿ ಪತ್ನಿಯ ಅಸಲಿ ಮುಖವಾಡ ಕಳಚಿ, ಆಕೆಯ ಕರ್ಮಕಾಂಡವನ್ನು ದೊಡ್ಡದಾದ ಪೋಸ್ಟ್ ಮೂಲಕ ಬಯಲು ಮಾಡಿದ್ದಾರೆ. ಈ ಕೇಸ್ ಯಾವ ಹಂತಕ್ಕೆ ತಲುಪಲಿದೆ? ಪ್ರಸನ್ನ ಶಂಕರ್ ಮುಂದಿನ ನಡೆಯೇನು? ಎಂಬುದು ನೆಟ್ಟಿಗರಲ್ಲಿ ತೀವ್ರ ಗೊಂದಲ ಮೂಡಿಸಿದೆ,(ಏಜೆನ್ಸೀಸ್).