ಕಳ್ಳಭಟ್ಟಿ ಸೇವಿಸಿ 86 ಜನರ ಸಾವು; 7 ಅಬಕಾರಿ, 6 ಪೊಲೀಸರ ಅಮಾನತು; 25 ಜನರ ಬಂಧನ

Punjab liquor2
Published on

ಚಂಡಿಗಢ್​: ಪಂಜಾಬ್​ನಲ್ಲಿ ಕೋಲಾಹಲ ಉಂಟು ಮಾಡಿರುವ ವಿಷಪೂರಿತ ಮದ್ಯ ಅಥವಾ ಕಳ್ಳಭಟ್ಟಿ ದುರಂತಕ್ಕೆ ಬಲಿಯಾದವರ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಲಾಗಿದೆ. 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಕರ್ತವ್ಯಲೋಪ ಆಧಾರದಲ್ಲಿ ಅಬಕಾರಿ ಇಲಾಖೆಯ ಏಳು ಹಾಗೂ ಪೊಲೀಸ್​ ಇಲಾಖೆಯ 6 ಜನರನ್ನು ಅಮಾನತುಗೊಳಿಸಿ ಸಿಎಂ ಅಮರಿಂದರ್​ ಸಿಂಗ್​ ಆದೇಶ ಹೊರಡಿಸಿದ್ದಾರೆ.

ಪಂಜಾಬ್​ನ ಮೂರು ಜಿಲ್ಲೆಗಳಾದ ಅಮೃತಸರ ಗ್ರಾಮೀಣ, ಗುರುದಾಸ್​ಪುರ ಹಾಗೂ ತರಣ್​ ತರಣ್​ ಮತ್ತು ರಾಜಪುರ್​ ಹಾಗೂ ಶಂಬು ಗಡಿ ಪ್ರದೇಶದಲ್ಲಿ ವಿಷಪೂರಿತ ಮದ್ಯ ಅಥವಾ ಕಳ್ಳಭಟ್ಟಿ ಸೇವಿಸಿ ಕಳೆದ ಕೆಲ ದಿನಗಳಿಂದ ಹಲವು ಸಾವಿಗೀಡಾಗುತ್ತಿದ್ದಾರೆ. ಶನಿವಾರದವರೆಗೆ ಮೃತರ ಸಂಖ್ಯೆ 86ಕ್ಕೆ ಏರಿದೆ.

ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ. ತರಣ್​ ತರಣ್ ಜಿಲ್ಲೆಯಲ್ಲಿ 63 ಜನರು ಮೃತಪಟ್ಟಿದ್ದಾರೆ. ಅಮೃತಸರ ಗ್ರಾಮೀಣ ಜಿಲ್ಲೆಯಲ್ಲಿ 12, ಗುರುದಾಸ್​ಪುರ್​ನ ಬಟಾಲಾದಲ್ಲಿ 11 ಜನರು ಕಳ್ಳಭಟ್ಟಿಗೆ ಬಲಿಯಾಗಿದ್ದಾರೆ.

ಕಳ್ಳಭಟ್ಟಿ ದುರಂತಕ್ಕೆ ಮಹಿಳೆಯೊಬ್ಬಳು ಕಿಂಗ್​ಪಿನ್​ ಆಗಿದ್ದಾಳೆ. ಸಾರಿಗೆ ಉದ್ಯಮಿ, ಡಾಬಾಗಳ ಮಾಲೀಕರು ಬಂಧಿತರಲ್ಲಿ ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net