

ಲಖನೌ: ಶಾಲೆಯ ತರಗತಿಗಳಲ್ಲಿ ಕುಳಿತುಕೊಳ್ಳುವ ಸೀಟಿಗಾಗಿ ಜಗಳವಾಡಿದ ನೆನಪು ನಿಮಗಿರಬಹುದು. ಅವೆಲ್ಲ ಎಂದೆಂದಿಗೂ ಖುಷಿ ಕೊಡುವಂತಹ ಬಾಲ್ಯದ ನೆನಪುಗಳು. ಆದರೆ ಇಲ್ಲೊಬ್ಬ ಬಾಲಕ ಮಾತ್ರ, ಸೀಟಿಗಾಗೇ ಜಗಳವಾಡಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ. ಅದರ ಜತೆ ಇನ್ನೊಬ್ಬ ಬಾಲಕನ ಜೀವನದ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ.
ಉತ್ತರ ಪ್ರದೇಶದ ಬುಲಂದ್ಶಹರ್ನ ಹೈಸ್ಕೂಲ್ ಒಂದರಲ್ಲಿ ಇಂತಹ ಘಟನೆ ನಡೆದಿದೆ. 10ನೇ ತರಗತಿಯಲ್ಲಿ ಓದುತ್ತಿರುವ 14 ವರ್ಷದ ಬಾಲಕ ಬುಧವಾರದಂದು ತನ್ನ ಸಹಪಾಠಿಯೊಂದಿಗೆ ಕೂರುವ ಸೀಟಿನ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾನೆ. ಅದೇ ಸಿಟ್ಟಿನಿಂದ ಮನೆಗೆ ಬಂದಿದ್ದಾನೆ. ಆತನ ಮನೆಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಕಲ್ ರಜೆಯ ಮೇಲೆ ಬಂದಿದ್ದರು. ಅವರ ಬ್ಯಾಗಿನಲ್ಲಿ ಗನ್ ಇರುವುದನ್ನು ನೋಡಿಕೊಂಡಿದ್ದ ಬಾಲಕ ಆ ಗನ್ನನ್ನು ಅವರ ಬ್ಯಾಗಿಂದ ತೆಗೆದು ತನ್ನ ಶಾಲೆಯ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದಾನೆ.
ಗುರುವಾರ ಶಾಲೆಗೆ ತೆರಳಿದ ಬಾಲಕ ಎರಡು ಕ್ಲಾಸ್ ಮುಗಿಯುವರೆಗೂ ಸುಮ್ಮನಿದ್ದಾನೆ. ಮೂರನೇ ಕ್ಲಾಸ್ ಆರಂಭವಾಗುವುದರೊಳಗೆ ಬ್ಯಾಗಿನಿಂದ ಗನ್ ತೆಗೆದು ಜಗಳವಾಡಿದ್ದ ಸಹಪಾಠಿಯತ್ತ ಗುಂಡು ಹಾರಿಸಿದ್ದಾನೆ. ತಲೆಗೆ, ಎದೆಗೆ ಮತ್ತು ಹೊಟ್ಟೆಗೆ ಗುಂಡು ಹಾರಿಸಿರುವ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಹಪಾಠಿಯನ್ನು ಕೊಂದ ಬಾಲಕ ಮೊದಲನೇ ಮಹಡಿಯಲ್ಲಿದ್ದ ತನ್ನ ತರಗತಿಯಿಂದ ಹೊರಗೆ ಓಡಿ, ಶಾಲೆಯಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆತನನ್ನು ತಡೆಯಲು ಬಂದವರಿಗೆ ಗನ್ ತೋರಿಸಿ ಹೆದರಿಸಿದ್ದಾನೆ. ಅದಾಗ್ಯೂ ಆತನನ್ನು ತಡೆಯುವಲ್ಲಿ ಶಿಕ್ಷಕ ವೃಂದ ಯಶಸ್ವಿಯಾಗಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಲಾಗಿದ್ದು, ಇದೀಗ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)