ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!

propose
Published on

ವಿಯೆನ್ನಾ: ಪ್ರೊಪೋಸಲ್​ ಬಗ್ಗೆ ಪ್ರತಿಯೊಬ್ಬರಿಗೇ ಅವರದ್ದೇ ಆದ ವಿಶೇಷ ಕನಸುಗಳಿರುತ್ತದೆ. ಅದೇ ರೀತಿ ಕನಸು ಕಟ್ಟಿಕೊಂಡು, ಇಷ್ಟದ ಹುಡುಗಿಗೆ ಪ್ರಪೋಸ್​ ಮಾಡಿದ ಯುವಕನೊಬ್ಬ ಪೇಚಿಗೆ ಸಿಲುಕಿದ ಘಟನೆ ಆಸ್ಟ್ರಿಯಾದಲ್ಲಿ ನಡೆದಿದೆ.

27 ವರ್ಷದ ಯುವಕ 32 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ತನ್ನ ಪ್ರೀತಿಯನ್ನು ಹೇಳಿಕೊಳ್ಳುವ ಸಲುವಾಗಿ ಆತ ಆಕೆಯನ್ನು ಬೆಟ್ಟವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಸೂರ್ಯಾಸ್ತಮಾನದ ಸಮಯದಲ್ಲಿ ಬೆಟ್ಟದ ಕಲ್ಲು ಬಂಡೆಯೊಂದರ ಮೇಲೆ ನಿಂತು ಯುವತಿಗೆ ಪ್ರಪೋಸ್​ ಮಾಡಿದ್ದಾನೆ. ಮೊದಲೇ ಇಷ್ಟವಿದ್ದ ಹುಡುಗ ಪ್ರಪೋಸ್​ ಮಾಡಿದ ಎನ್ನುವ ಖುಷಿಯಲ್ಲಿ ಆತನ ಪ್ರೀತಿ ಕೋರಿಕೆಯನ್ನು ಒಪ್ಪಿದ್ದಾಳೆ. ಖುಷಿಯಲ್ಲಿದ್ದ ಯುವತಿಗೆ ಕಾಲು ಜಾರಿದ್ದು, ಆಕೆ ಬಂಡೆಯಿಂದ ಕೆಳಗೆ ಬಿದ್ದಿದ್ದಾಳೆ. ಸುಮಾರು 650 ಮೀಟರ್​ಗಳಷ್ಟು ಆಳಕ್ಕೆ ಯುವತಿ ಬಿದ್ದಿದ್ದಾಳೆ.

ಯುವತಿಯನ್ನು ರಕ್ಷಿಸುವ ಸಲುವಾಗಿ ಯುಕನೂ ಬಂಡೆಯಿಂದ ಕೆಳಕ್ಕೆ ಹಾರಿದ್ದಾನೆ. ಆದರೆ 15 ಮೀಟರ್​ ಕೆಳಗೆ ಬೀಳುವಷ್ಟರಲ್ಲಿ ಕೊಂಬೆಯೊಂದಕ್ಕೆ ಸಿಲುಕಿದ ಕಾರಣ ಅಲ್ಲೇ ಉಳಿದಿದ್ದಾನೆ.

ಬಂಡೆಯಿಂದ ಕೆಳಕ್ಕೆ ಬಿದ್ದ ಯುವತಿ ಅದೃಷ್ಟವಶಾತ್​ ಹಿಮದ ಹಾಸಿಗೆಯ ಮೇಲೆ ಬಿದ್ದಿದ್ದಾಳೆ. ಆ ವೇಳೆ ಅಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಆಕೆಯನ್ನು ಗಮನಿಸಿದ್ದು, ತಕ್ಷಣ ಆ್ಯಂಬುಲೆನ್ಸ್​ಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ಯುವತಿ ಮತ್ತು ಯುವಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇಬ್ಬರ ಅದೃಷ್ಟ ಚೆನ್ನಾಗಿತ್ತು. ಸ್ವಲ್ಪದರಲ್ಲೇ ಸಾವಿನಿಂದ ಬಚಾವಾಗಿದ್ದಾರೆ. ಅವರ ಪ್ರೀತಿಗೆ ಆಯಸ್ಸು ಹೆಚ್ಚಿದೆ ಎಂದು ಚಿಕಿತ್ಸೆ ನೀಡಿರುವ ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net