ಆಸ್ಟ್ರೇಲಿಯಾ ಕಡಲ ತೀರದಲ್ಲಿ ನಿಗೂಢ ವಸ್ತು ಪತ್ತೆ: ಹತ್ತಿರ ಹೋಗದಂತೆ ಪೊಲೀಸ್​ ಇಲಾಖೆಯಿಂದ ಎಚ್ಚರಿಕೆ

Mystery Object new Final
Published on

ಸಿಡ್ನಿ: ಭಾರೀ ಗಾತ್ರದ ಲೋಹದ ಸಿಲಿಂಡರ್​ವೊಂದು​ ಪಶ್ಚಿಮ ಆಸ್ಟ್ರೇಲಿಯಾದ ಕಡಲ ತೀರದಲ್ಲಿ ತೇಲಿಬಂದಿದ್ದು, ಸಂಭಾವ್ಯ ಅಪಾಯಕಾರಿ ಹಿನ್ನೆಲೆಯಲ್ಲಿ ಅದರ ಬಳಿ ಯಾರು ಹೋಗದಂತೆ ಸ್ಥಳೀಯ ಜನರಿಗೆ ಆಸ್ಟ್ರೇಲಿಯಾ ಪೊಲೀಸರು ಒತ್ತಾಯಿಸಿದ್ದಾರೆ.

ಇಂಡಿಪೆಂಡೆಂಟ್​ ಮಾಧ್ಯಮ ವರದಿಯ ಪ್ರಕಾರ ಅಪರಿಚಿತ ಸಾಧನದ ಬಗ್ಗೆ ಭಾನುವಾರ ಮಧ್ಯಾಹ್ನ ಮಧ್ಯ-ಪಶ್ಚಿಮ ಕರಾವಳಿಯ ಗ್ರೀನ್ ಹೆಡ್ ಟೌನ್ ಬಳಿಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ ಬಳಿಕ ಬೆಳಕಿಗೆ ಬಂದಿದ್ದು, ಈ ವಸ್ತುವಿನ ಮೂಲ ಮತ್ತು ಅದರ ಸ್ವಭಾವವನ್ನು ತಿಳಿಯಲು ಪಶ್ಚಿಮ ಆಸ್ಟ್ರೇಲಿಯನ್ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಅನೇಕ ವದಂತಿಗಳು

ಅಂದಹಾಗೆ ಈ ವಸ್ತುವಿನ ಬಗ್ಗೆ ನಾನಾ ವಂದಂತಿಗಳು ಹರಡುತ್ತಲೇ ಇದೆ. ಅನೇಕ ಜನರು ಇದನ್ನು UFO ಗಳಿಗೆ ಲಿಂಕ್ ಮಾಡಿದ್ದಾರೆ ಮತ್ತು ಇತರರು ಅದನ್ನು ಕಾಣೆಯಾದ ಮಲೇಷಿಯಾದ MH370 ವಿಮಾನಕ್ಕೆ ಲಿಂಕ್ ಮಾಡಿದ್ದಾರೆ. ಆದರೆ, ಈವರೆಗೂ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರಕಿಲ್ಲ. ಸದ್ಯಕ್ಕೆ ತನಿಖೆ ನಡೆಯುತ್ತಿದೆ ಮತ್ತು ಹೆಚ್ಚಿನ ಮಾಹಿತಿ ಲಭ್ಯವಾಗುವವರೆಗೆ, ಊಹಾಪೋಹಗಳನ್ನು ಹಬ್ಬಿಸದಂತೆ ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

ಯುಎಫ್​ಒಗೆ ರಕ್ಷಣೆ

ತನಿಖೆಯ ಸಮಗ್ರತೆಯನ್ನು ಕಾಪಾಡುವ ಸಲುವಾಗಿ ಪಶ್ಚಿಮ ಆಸ್ಟ್ರೇಲಿಯಾ ಪೊಲೀಸ್ ಪಡೆಯ ಅಧಿಕಾರಿಗಳು ಪ್ರಸ್ತುತ ವಸ್ತುವನ್ನು ರಕ್ಷಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ವಸ್ತುವಿನ ಚಿತ್ರಗಳು ಮತ್ತು ವಿಡಿಯೋಗಳು ವೈರಲ್​ ಆಗಿದ್ದು, ತಾಮ್ರದ ಬಣ್ಣದ ಯುಎಫ್​ಒ ಹಾನಿಗೆ ಒಳಗಾಗಿರುವ ಸ್ಥಿತಿಯಲ್ಲಿ ದೊರಕಿದೆ. ಈ ವಸ್ತುವು ಯಾವುದೋ ವಸ್ತುವಿನಿಂದ ಬೇರ್ಪಟ್ಟಂತೆ ಕಾಣುತ್ತದೆ ಮತ್ತು ಅದರ ಕೆಳಭಾಗವು ಕಿತ್ತುಬಂದಂತೆ ಕಾಣುತ್ತದೆ.

ನಿಗೂಢ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆಯ ವಕ್ತಾರರು ಸಹ ಹೇಳಿದ್ದಾರೆ. ನಿಗೂಢ ವಸ್ತು ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದ ಭಾಗವಾಗಿರಬಹುದೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಮತ್ತು ಎಂದು ವಕ್ತಾರರು ಹೇಳಿದರು.

ಭಾರತದ ರಾಕೆಟ್​ನ ಭಾಗವೇ?

ಬಾಹ್ಯಾಕಾಶ ಪುರಾತತ್ವಶಾಸ್ತ್ರಜ್ಞ ಡಾ. ಆಲಿಸ್ ಗೋರ್ಮನ್ ಅವರು ದಿ ಗಾರ್ಡಿಯನ್‌ ಮಾಧ್ಯಮಕ್ಕೆ ನೀಡಿರುವ ಹೇಳಿಕೆ ಪ್ರಕಾರ, ಈ ನಿಗೂಢ ವಸ್ತುವು ಇಂಧನ ಸಿಲಿಂಡರ್ ಆಗಿದ್ದು, ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಅಥವಾ ಚಂದ್ರಯಾನ-3 ರ ಮೂರನೇ ಹಂತದಿಂದ ಸಮುದ್ರಕ್ಕೆ ಬಿದ್ದಿದೆ ಎಂದು ಹೇಳಿದರು. ಇದು ತುಂಬಾ ದೊಡ್ಡ ತುಣುಕಾಗಿರುವುದರಿಂದ ತೇಲಿ ಬಂದಿರುವುದು ಆಶ್ಚರ್ಯಕರವಾಗಿದೆ ಮತ್ತು ಬಹುಶಃ ಬದಲಾದ ಸಮುದ್ರ ಹವಾಮಾನವು ಇದನ್ನು ದಡಕ್ಕೆ ಹೊತ್ತು ತಂದಿರಬಹುದೆಂದು ಹೇಳಿದ್ದಾರೆ.

ವಿದೇಶಿ ಬಾಹ್ಯಾಕಾಶ ಉಡಾವಣಾ ವಾಹನದಿಂದ ಈ ದೈತ್ಯ ಸಿಲಿಂಡರ್ ಬಿದ್ದಿರುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ ಮತ್ತು ಮಾಹಿತಿ ತಿಳಿದುಕೊಳ್ಳಲು ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ. ಇಷ್ಟೇ ಅಲ್ಲದೆ, ಈ ಸಿಲಿಂಡರ್ ಭಾರತದ ಪಿಎಸ್‌ಎಲ್‌ವಿ ರಾಕೆಟ್‌ನ ಅವಶೇಷಗಳಾಗಿರಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹಲವಾರು ಊಹಾಪೋಹಗಳನ್ನು ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net