

ಸೋನು ಸೂದ್ ಕಳೆದ ನಾಲ್ಕು ತಿಂಗಳಿಂದ ಕರೊನಾ ಹಾವಳಿ ನಡುವೆಯೂ ಫೀಲ್ಡಿನಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ ನೀಡುತ್ತಿದ್ದಾರೆ. ಎತ್ತುಗಳಿಲ್ಲದ ರೈತಾಪಿ ಕುಟುಂಬಕ್ಕೆ ಟ್ರ್ಯಾಕ್ಟರ್ ನೀಡಿದ್ದಾರೆ. ಎಷ್ಟೋ ನಿರ್ಗತಿಕರನ್ನು ಅವರವರ ಊರು ತಲುಪಿಸಿದ್ದಾರೆ. ರೀಲ್ನಲ್ಲಿ ಖಳನಾಯಕನಾಗಿರುವ ಸೋನು ಸೂದ್, ರಿಯಲ್ ಲೈಫ್ನಲ್ಲಿ ಹೀರೋ ಆಗಿ ಕಾಣಿಸುತ್ತಿದ್ದಾರೆ. ಅವರು ಮಾಡುತ್ತಿರುವ ಪ್ರತಿ ಕಾರ್ಯವನ್ನು ಇಡೀ ದೇಶದ ಜನ ಶ್ಲಾಘಿಸುತ್ತಿದ್ದಾರೆ. ಇದೀಗ ಇದೇ ಸೋನು ಮತ್ತೊಂದು ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ಆಂಧ್ರದ ರೈತಾಪಿ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಡಿಸಿ ಸುದ್ದಿಯಾಗಿದ್ದ ಸೋನು, ಇದೀಗ ಅದೇ ಆಂಧ್ರದ ಯುವತಿಯ ಸಹಾಯಕ್ಕೆ ನಿಂತಿದ್ದಾರೆ. ಪ್ರತಿಷ್ಠಿತ ಕಂಪನಿಯೊಂದರಲ್ಲಿ ಜಾಬ್ ಗಿಟ್ಟಿಸಿಕೊಂಡಿದ್ದ ಶಾರದಾ, ಲಾಕ್ಡೌನ್ ನಷ್ಟದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ಕೈ ಬಿಡಲಾಗಿತ್ತು. ಬಳಿಕ ಕುಟುಂಬ ನಿರ್ವಹಣೆಗಾಗಿ ಕಳೆದ ಮೂರು ತಿಂಗಳಿಂದ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದಾರೆ. ಅವರ ಆ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಸೋನು ಸೂದ್ ಗಮನಕ್ಕೂ ಬಂದಿತ್ತು.
ಅಷ್ಟೇ ಮುಂದಾಗಿದ್ದೇ ಬೇರೆ! ಹೌದು, ಶಾರದಾ ಅವರ ಪರಿಸ್ಥಿತಿ ಅರಿತ ಸೋನು ತಕ್ಷಣ ಅವರನ್ನು ಸಂಪರ್ಕಿಸುವಂತೆ ಅವರ ತಂಡಕ್ಕೆ ಹೇಳಿದ್ದರು. ಇದೀಗ ಶಾರದಾ ಸಂದರ್ಶನ ಮುಗಿಸಿದ್ದು, ಜಾಬ್ ಲೆಟರ್ ಸಹ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಟ್ವಿಟರ್ ಮೂಲಕ ಸ್ವತಃ ಸೋನು ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಕೆಲಸ ನೀಡುವ ಉದ್ದೇಶದಿಂದ ಪ್ರವಾಸಿ ರೋಜ್ಗಾರ್ ಸಂಸ್ಥೆ ಸ್ಥಾಪಿಸಿರುವ ಸೋನು, ಇದೀಗ ಅದರ ಮೂಲಕವೇ ಶಾರದಾಗೆ ಕೆಲಸ ನೀಡಿದ್ದಾರೆ. (ಏಜೆನ್ಸೀಸ್)