

ಸೋನು ಸೂದ್ ಸಿನಿಮಾ ಹೊರತುಪಡಿಸಿ ರಿಯಲ್ ಹೀರೋ ಆಗಿ ಕಾಣಿಸುತ್ತಿದ್ದಾರೆ. ಅವರು ಮಾಡುತ್ತಿರುವ ಪ್ರತಿ ಕಾರ್ಯವನ್ನು ಇಡೀ ದೇಶದ ಜನ ಶ್ಲಾಘಿಸುತ್ತಿದ್ದಾರೆ. ಜನರನ್ನು ಅವರವರ ಊರಿಗೆ ತಲುಪಿಸುವುದು ಒಂದೆಡೆಯಾದರೆ, ಕೆಲಸ ಇಲ್ಲದವರಿಗೆ ಕೆಲಸವನ್ನೂ ನೀಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ನಿರ್ಗತಿಕರಿಗೆ ಹಣಕಾಸಿನ ನೆರವನ್ನೂ ಮಾಡುತ್ತಿದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಂಧ್ರಪ್ರದೇಶದ ಯುವತಿಯರಿಗೆ ಬೆನ್ನೆಲುಬಾಗಿದ್ದಾರೆ.
ಹೌದು, ಎತ್ತುಗಳಿಲ್ಲದೆ ತಾವೇ ಎತ್ತುಗಳಾಗಿ ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ವಿಡಿಯೋ ನೋಡಿದ್ದೇ ತಡ ಸೋನು ಸೂದ್ ಅವರಿಗೆ ಬೇಕಾದ ಅವಶ್ಯಕತೆಗಿಂತ ಹೆಚ್ಚಿನದನ್ನೇ ನೀಡಿದ್ದಾರೆ. ಹೌದು ಎತ್ತುಗಳ ಬದಲು ಒಂದು ಟ್ರ್ಯಾಕ್ಟರ್ ಅನ್ನೇ ನೀಡಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೋರ್ ಜಿಲ್ಲೆಯ ಮದನಪಲ್ಲಿಯ ಟೊಮಾಟೊ ಬೆಳೆಗಾರನಿಗೆ ಎತ್ತುಗಳನ್ನು ಬಾಡಿಗೆ ಪಡೆದು ಉಳುಮೆ ಮಾಡುವಷ್ಟು ಶಕ್ತಿ ಇಲ್ಲ. ಅದರ ಜತೆಗೆ ಈ ಬಾರಿ ಕರೊನಾದಿಂದ ದೊಡ್ಡ ನಷ್ಟ ಉಂಟಾಗಿರುವುದು ಕುಟುಂಬಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇದೀಗ ಈ ಕುಟುಂಬದ ಬೆನ್ನೆಲುಬಾಗಿ ಸೋನು ಸೂದ್ ನಿಂತಿದ್ದು, ಟ್ರ್ಯಾಕ್ಟರ್ ಅನ್ನೇ ಕಳುಹಿಸಿಕೊಟ್ಟಿದ್ದಾರೆ. (ಏಜೆನ್ಸೀಸ್)