ರಾಜಕೀಯ ಪ್ರಚಾರಕ್ಕೆ ಸೇನೆ ದುರ್ಬಳಕೆ; ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Mallikarjun Kharge
Published on

ನವದೆಹಲಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರವು ಅಧಿಕಾರಿಗಳು ಹಾಗೂ ಸೈನಿಕರನ್ನು ಬಿಜೆಪಿ ಪಕ್ಷದ ಮಾರ್ಕೆಟಿಂಗ್​ ಏಜೆಂಟರನ್ನಾಗಿ ಪರಿವರ್ತಿಸಿದೆ. ಸರ್ಕಾರದ ಅಧಿಕಾರಿಗಳು ಬಿಜೆಪಿಯ ಪ್ರಚಾರಕರಾಗಿ ಮಾರ್ಪಡಿಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 9ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಸರ್ಕಾರದ ಸಾಧನೆಗಳನ್ನು ಸಾರಲು ರಥಯಾತ್ರೆ ನಡೆಸಲು ಉದ್ದೇಶಿಸಿದೆ. ಇದಕ್ಕೆ ಸರ್ಕಾರ ಹಿರಿಯ ಅಧಿಕಾರಿಗಳು ಹಾಗೂ ರಜೆಯ ಮೇಲೆ ಸೈನಿಕರನ್ನು ನಿಯೋಜನೆ ಮಾಡಲು ಚಿಂತನೆ ನಡೆಸಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಸೇನೆ ಹಾಗೂ ಸರ್ಕಾರಿ ಯಂತ್ರವನ್ನು ರಾಜಕೀಯದಿಂದ ಹೊರಗಿಡುವುದು ಅತ್ಯಗತ್ಯ. ಈಗಾಗಲೇ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಬಿಜೆಪಿಯ ಚುನಾವಣಾ ಇಲಾಖೆಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಸರ್ಕಾರದ ಎಲ್ಲಾ ಇಲಾಖೆ ಹಾಗೂ ಸಂಸ್ಥೆಗಳು ಅಧಿಕೃತವಾಗಿ ಬಿಜೆಪಿಯ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ತನ್ನ ಸರ್ಕಾರದ ಯೋಜನೆಗಳಿಗೆ ಅಧಿಕಾರಿಗಳನ್ನು ನೇಮಿಸಿರುವುದು ಸರಿಯಿಲ್ಲ. ಕೂಡಲೇ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕಳೆದ ಒಂಬತ್ತು ವರ್ಷಗಳ ಸರ್ಕಾರದ ಸಾಧನೆಯನ್ನು ಸಾರಲು ಅಧಿಕಾರಿಗಳನ್ನು ಬಳಸಿಕೊಳ್ಳಲು ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದೀರಾ. ಮುಂಬರುವ ಪಂಚರಾಜ್ಯ ಹಾಗೂ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ. ಕೂಡಲೇ ಪ್ರಧಾನಿ ಮೋದಿ ಈ ಆದೇಶವನ್ನು ಹಿಂಡಪೆಡೆಯುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತೋರಬೇಕು.

ಒಂದು ವೇಳೆ ಸರ್ಕಾರಿ ಅಧಿಕಾರಿಗಳನ್ನು ಬಿಜೆಪಿ ತನ್ನ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡರೆ ಮುಂದಿನ ಆರು ತಿಂಗಳ ಕಾಲ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದು ಸೂಕ್ತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net