

ನೋಯ್ಡಾ: ಶಿಕ್ಷಕರ ಪಾಠವನ್ನು ಗಂಭೀರವಾಗಿ ಆಲಿಸುತ್ತಿದ್ದ ವಿದ್ಯಾರ್ಥಿಗಳು ತರಗತಿಯೊಳಗೆ ಅಳವಡಿಸಲಾಗಿದ್ದ ಎಸಿ ಯಂತ್ರದಿಂದ ಹೊರಬಂದ ಹಾವನ್ನು ಕಂಡು ಬೆಚ್ಚಿಬಿದ್ದ ಘಟನೆ ಅಮಿಟಿ ಯೂನಿವರ್ಸಿಟಿಯಲ್ಲಿ ಸಂಭವಿಸಿದೆ. ಆಘಾತಕಾರಿ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾವೊಂದು ಎಸಿಯಿಂದ ಹೊರಬರಲು ಯತ್ನಿಸುತ್ತಿರುವ ದೃಶ್ಯ ಕಂಡ ಕೆಲವು ವಿದ್ಯಾರ್ಥಿಗಳು ತಕ್ಷಣವೇ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಇನ್ನು ಕೆಲವರಿಗೆ ಇದರ ಬಗ್ಗೆ ಅರಿವೇ ಇರಲಿಲ್ಲ. ಆದ್ರೆ, ಯಾವಾಗ ಹಾವು ತನ್ನ ದೇಹವನ್ನು ಅತ್ತ-ಇತ್ತ ಆಡಿಸಿತೋ ಉಳಿದಿದ್ದ ವಿದ್ಯಾರ್ಥಿಗಳು ಜೋರಾಗಿ ಕೂಗಾಡಿ, ತರಗತಿಯಿಂದ ಕಾಲ್ಕಿತ್ತಿದ್ದಾರೆ.
13 ಸೆಕೆಂಡ್ಗಳ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ದೃಶ್ಯದಲ್ಲಿ ವಿದ್ಯಾರ್ಥಿಗಳು ಚೀರಾಡಿ, ತರಗತಿಯಿಂದ ಓಡಿ ಹೋಗುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು, ತಕ್ಷಣವೇ ಎಚ್ಚೆತ್ತುಕೊಂಡ ಸೆಕ್ಯೂರಿಟಿ ಉರಗ ರಕ್ಷಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).