

ಗದಗ: ಆಟ ಆಡುವ ಖುಷಿಯಲ್ಲಿದ್ದ ಈ ಮಕ್ಕಳು ಒಮ್ಮೆಲೇ ಬೆಚ್ಚಿ ಬಿದ್ದಿದ್ದಾರೆ. ಆಡಲೆಂದು ಸ್ಕೂಟಿಯೊಂದರಲ್ಲಿ ಕುಳಿತಿದ್ದ ಇವರು ಎದ್ನೋ ಬಿದ್ನೋ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ಆಟ ಆಡುತ್ತಿದ್ದ ಮಕ್ಕಳ ಮುಂದೆಯೇ ದಿಢೀರ್ ಎಂದು ಹಾವೊಂದು ಕಾಣಿಸಿಕೊಂಡಿದ್ದು.
ಹೌದು.. ಸ್ಕೂಟಿಯೊಂದರ ಮೇಲೆ ಅದೂ ಮನೆಯೊಳಗೇ ಹಾವೊಂದು ಪ್ರತ್ಯಕ್ಷವಾಗಿದೆ. ಇಂಥದ್ದೊಂದು ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಆಶ್ರಯ ಕಾಲನಿ ನಿವಾಸಿ ನವಾಬ ಪಠಾಣ್ ಎನ್ನುವವರ ಮನೆಯಲ್ಲಿ ನಡೆದಿದೆ.
ಇವರು ಮನೆಯೊಳಗೆ ನಿಲ್ಲಿಸಿದ್ದ ಸ್ಕೂಟಿಯ ಮೇಲೆ ಮಕ್ಕಳು ಇಂದು ಹತ್ತಿ ಆಟ ಆಡಲು ತೊಡಗಿದ್ದರು. ಆಗ ಸೀಟ್ನ ಅಡಿ ಭಾಗದಿಂದ ಹಾವು ಹೊರಕ್ಕೆ ಬಂದಿದೆ. ಇದನ್ನು ನೋಡಿ ಮಕ್ಕಳು ಬೆಚ್ಚಿ ಬಿದ್ದಿದ್ದರು. ನಂತರ ಕೂಡಲೇ ಉರಗಪ್ರೇಮಿ ಬಿ.ಆರ್.ಸುರೇಬಾನ ಎಂಬವರನ್ನು ಕರೆಸಿ ಹಾವನ್ನು ಹಿಡಿಯಲಾಗಿದೆ. ಅವರು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.