ಪ.ಪೂರ್ವ ವಿದ್ಯಾರ್ಥಿಗಳಿಗೆ ಇನ್ಮುಂದೆ ಇಂಟರ್ನ್​ಷಿಪ್​ ಕಡ್ಡಾಯ: ಯುಜಿಯಿಂದ ಹೊಸ ಮಾರ್ಗಸೂಚಿ

UGC
Published on

ನವದೆಹಲಿ: ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿನ ಎಲ್ಲ ಪದವಿಪೂರ್ವ ವಿದ್ಯಾರ್ಥಿಗಳು 8-10 ಹತ್ತು ವಾರಗಳವರೆಗೆ ಸಂಶೋಧನಾ ಇಂಟರ್ನ್‌ಷಿಪ್ ಕಡ್ಡಾಯವಾಗಿ ಮಾಡಬೇಕು ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2022ರ ಅನುಷ್ಠಾನದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಒಂದೊಂದೇ ಬದಲಾವಣೆಗಳು ಆರಂಭವಾಗಿದ್ದು, ಅದರ ಒಂದು ಭಾಗವಾಗಿ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ಇಂಟರ್ನ್​ಷಿಪ್ ಮಾಡಬೇಕು ಎಂದಿರುವ ಯುಜಿಸಿ, ಸಂಶೋಧನಾ ಇಂಟರ್ನ್​ಷಿಪ್‌ಗಳ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ)- 2020ಯಲ್ಲಿಯೂ ಇಂಟರ್ನ್​ಷಿಪ್​ ಕಡ್ಡಾಯ ಮಾಡಲಾಗಿದೆ. ಇದರ ಅನ್ವಯ ಪದವಿಯಲ್ಲಿ ಯಾವುದೇ ವಿಷಯಗಳನ್ನು ಆಯ್ಕೆ ಮಾಡಿಕೊಂಡರೂ ನಿರ್ದಿಷ್ಟವಾಗಿ ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮಗಳಿಗೆ ಸಂಶೋಧನೆ ಕೈಗೊಳ್ಳಬೇಕು ಎಂದು ಇದೆ.

ಮಾರ್ಗಸೂಚಿಯಲ್ಲಿ ಏನಿದೆ?

ಇಂಟರ್ನ್‌ಶಿಪ್ ಕಡ್ಡಾಯವಾಗಿದ್ದರೂ, ಇದರ ಕಾಲಾವಧಿಯು ವಿದ್ಯಾರ್ಥಿಯು ಮುಂದುವರಿಸಲು ಬಯಸುವ ಕೋರ್ಸ್‌ನ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ವಿದ್ಯಾರ್ಥಿಗಳು ಎರಡು ಸೆಮಿಸ್ಟರ್‌ಗಳು (ಮೊದಲ ವರ್ಷ) ಅಥವಾ ನಾಲ್ಕು ಸೆಮಿಸ್ಟರ್‌ಗಳು (ಎರಡನೇ ವರ್ಷ) ನಂತರ ಕೋರ್ಸ್‌ನಿಂದ ನಿರ್ಗಮಿಸಬಹುದು. ಒಂದು ವರ್ಷದ ನಂತರ ನಿರ್ಗಮಿಸಿದರೆ ಅವರಿಗೆ ಪ್ರಮಾಣಪತ್ರ ಮಾತ್ರ ಸಿಗುತ್ತದೆ. ಎರಡು ವರ್ಷಗಳ ನಂತರ ನಿರ್ಗಮಿಸಿದರೆ ಅವರಿಗೆ ಡಿಪ್ಲೊಮಾ ಪದವಿಯನ್ನು ನೀಡಲಾಗುತ್ತದೆ.

ಆದರೆ ಒಂದು ವೇಳೆ ಈ ಅವಧಿಯಲ್ಲಿ ಅರ್ಥಾತ್​ 2 ಅಥವಾ 4ನೇ ಸೆಮಿಸ್ಟರ್‌ನ ನಂತರ ಕೋರ್ಸ್​ ಬಿಟ್ಟರೆ ಅಂಥವರಿಗೆ 8-10 ವಾರಗಳ 10 ಕ್ರೆಡಿಟ್‌ಗಳ ಇಂಟರ್ನ್‌ಶಿಪ್‌ಗಳು ಪ್ರಮಾಣಪತ್ರ ಅಥವಾ ಡಿಪ್ಲೊಮಾದೊಂದಿಗೆ ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ.

ಸಂಶೋಧನೆಯೊಂದಿಗೆ ನಾಲ್ಕು ವರ್ಷಗಳ ಪದವಿಯನ್ನು ಮುಂದುವರಿಸಿದರೆ ಅಂಥ ವಿದ್ಯಾರ್ಥಿಗಳು 10 ವಾರಗಳ ಇಂಟರ್ನ್‌ಶಿಪ್ ಜತೆಗೆ ಒಂದು ವರ್ಷದ ನಿಜವಾದ ಸಂಶೋಧನಾ ಕಾರ್ಯವನ್ನು ಮಾಡಬೇಕಾದುದು ಕಡ್ಡಾಯ. ಸರಳ ನಾಲ್ಕು ವರ್ಷಗಳ ಪದವಿಪೂರ್ವ ಶಿಕ್ಷಣವನ್ನು ಪಡೆಯಬಯಸುವವರು ಕನಿಷ್ಠ 8-10 ವಾರಗಳ ಇಂಟರ್ನ್‌ಶಿಪ್ ಮುಂದುವರಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net