

ಹರಿದ್ವಾರ (ಉತ್ತರಾಖಂಡ): ನನ್ನ ಮಗನನ್ನು ಕಷ್ಟಪಟ್ಟು ಓದಿಸಿದ್ವಿ. ಅವನ ಓದಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ವಿ. ಅವನು ಪೈಲಟ್ ಹುದ್ದೆ ಪಡೆಯಲು ನಾನು ತುಂಬಾ ಕಷ್ಟಪಟ್ಟಿದ್ದೇವೆ. ಮಾತ್ರವಲ್ಲದೇ ಆತನ ಮದುವೆಯನ್ನೂ ಅದ್ಧೂರಿಯಾಗಿಯೇ ಮಾಡಿದ್ದೇವೆ. ನವದಂಪತಿಯನ್ನು ಹನಿಮೂನ್‍ಗೆ ನಮ್ಮ ಸ್ವಂತ ಹಣದಿಂದ ಥಾಯ್ಲೆಂಡ್‍ಗೆ ಕಳುಹಿಸಿದ್ದೇನೆ. ಈಗ ನಮ್ಮ ಬಳಿ ಹಣವಿಲ್ಲ. ಸಾಲ ಮಾಡುವ ಸ್ಥಿತಿ ಬಂದಿದೆ. ಆದರೆ ಮಗನೀಗ ಪತ್ನಿಯ ಮಾತು ಕೇಳಿ ನಮ್ಮನ್ನು ಕಡೆಗಣಿಸುತ್ತಿದ್ದಾನೆ...
ಹೀಗೆಂದು ಹರಿದ್ವಾರದ ಮಹಿಳೆಯರೊಬ್ಬರು ಕೋರ್ಟ್ನಲ್ಲಿ ಅವಲತ್ತುಕೊಂಡು ಮಗ- ಸೊಸೆಯ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ತಮ್ಮಿಂದ ಬೇರೆಯಾಗಿರುವ ಮಗ-ಸೊಸೆ ಒಂದು ವರ್ಷದಲ್ಲಿ ಮಗು ಹೆತ್ತು ಕೊಡದೇ ಹೋದರೆ ಐದು ಕೋಟಿ ರೂಪಾಯಿ ಪರಿಹಾರ ಕೊಡಲು ಆದೇಶಿಸಿ ಎಂದು ಕೋರ್ಟ್ ಅನ್ನು ಮಹಿಳೆ ಕೋರಿದ್ದಾರೆ.
ಮದುವೆಯಾದ ಮೇಲೆ ಪತ್ನಿ ಹೇಳಿದಂತೆ ಕೇಳಿದ ಮಗ ನಮ್ಮನ್ನೆಲ್ಲಾ ಬಿಟ್ಟು ಹೈದರಾಬಾದ್ನಲ್ಲಿ ಸೆಟ್ಲ್ ಆಗಿದ್ದಾನೆ. ಈಗ ನೋಡಿದ್ರೆ ಇಬ್ಬರೂ ಮಾತನಾಡುತ್ತಿಲ್ಲ. ಮಗ ನಮಗೂ ಹಣ ಕೊಡದೇ ಪೂರ್ತಿ ಸಂಬಳ ತನ್ನ ಸಂಸಾರಕ್ಕೆ ಖರ್ಚು ಮಾಡುತ್ತಿದ್ದಾನೆ. ಪ್ರತಿ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮಗ ಹೆಂಡತಿಯ ಮಾತನ್ನು ಕೇಳುತ್ತಾನೆ ಎಂದು ಅರ್ಜಿಯಲ್ಲಿ ದೂರಿರುವ ಮಹಿಳೆ, ಒಂದು ವರ್ಷದೊಳಗೆ ಸೊಸೆ ಗರ್ಭಧರಿಸಲು ಆದೇಶಿಸಿ ಎಂದು ಕೋರ್ಟ್ ಅನ್ನು ಕೋರಿದ್ದಾರೆ.