ಖಾತೆ ಬದಲಾವಣೆ ಮಾಡಿ ಕೊಡಿ ಎಂದಿದ್ದಕ್ಕೆ ಸಿಕ್ಕ ಖಾತೆಯನ್ನು ನಿಭಾಯಿಸಿ ಎಂದ ಸಿಎಂ ಸಿದ್ದು!

Siddaramaiah
Published on

ಬೆಂಗಳೂರು: ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅನೇಕ ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ ಎಂದಿದ್ದ ಕಾಂಗ್ರೆಸ್​ ಮುಂದೆ ಖಾತೆ ಕ್ಯಾತೆ ಬಂದಾಗ ಸಿಎಂ ಸಿದ್ದರಾಮಯ್ಯ ಆ ಬಗ್ಗೆ ಕಿಂಚಿತ್ತೂ ಚಿಂತೆ ಮಾಡದೇ ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ಖಡಕ್ ಸೂಚನೆ ನೀಡಿ ಕಳಿಸಿದ್ದಾರೆ.

ಶಿವಾನಂದ್ ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಹೆಚ್ ಮುನಿಯಪ್ಪ ಸೇರಿದಂತೆ ಕೆಲ ಹಿರಿಯ ನಾಯಕರು ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಆದರೆ ಇದ್ಯಾವುದಕ್ಕೂ ಡೋಂಟ್ ಕೇರ್ ಎಂದ ಸಿದ್ದರಾಮಯ್ಯ ಕಿವಿ ಮಾತು ಹೇಳಿ ಕಳಿಸಿದ್ದಾರೆ.

ತಮಗೆ ಬೇಕಾದ ಖಾತೆ ನೀಡುವಂತೆ ನಾಯಕರು ಪಟ್ಟು ಹಿಡಿದಿದ್ದ ಕಾರಣ ಅಸಮಾಧಾನಗೊಂಡ ಸಿಎಂ ಸಿದ್ದರಾಮಯ್ಯ ರಾಮಲಿಂಗಾ ರೆಡ್ಡಿ ಅವರಿಗೆ ಮಾತ್ರ ಹೆಚ್ಚುವರಿ ಖಾತೆ ನೀಡಿದ್ದಾರೆ. ರಾಮಲಿಂಗಾ ರೆಡ್ಡಿಗೆ ಸಾರಿಗೆ ಖಾತೆ ಜತೆಗೆ ಹೆಚ್ಚುವರಿಯಾಗಿ ಮುಜರಾಯಿ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಯನ್ನು ಸಿದ್ದರಾಮಯ್ಯ ಮಾಡಿಲ್ಲ.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ, "ಖಾತೆ ಯಾವುದೇ ಆದರೂ ಕೆಲಸ ಮಾಡುವುದು ಮುಖ್ಯ. ಈಗಷ್ಟೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜ‌ನರು ನಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಹೊತ್ತಿದ್ದಾರೆ. ಹೀಗಿರುವಾಗ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ. ಕೊಟ್ಟ ಖಾತೆಯನ್ನ ಪರಿಣಾಮಕಾರಿಯಾಗಿ ನಿಭಾಯಿಸಿ" ಎಂದು ಖಾತೆ ಬದಲಾವಣೆ ಮಾಡಿಕೊಡಿ ಎಂದು ಕೇಳಿದವರಿಗೆ ಕಿವಿಮಾತು ಹೇಳಿ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net