ದೆಹಲಿಯಲ್ಲಿ ಖರ್ಗೆಯನ್ನು ಪ್ರತ್ಯೇಕವಾಗಿ ಭೇಟಿಯಾದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್: ಏನಾಯ್ತು ಸಿಎಂ ಆಯ್ಕೆ ವಿಚಾರ?

Siddaramaiah DKS
ದೆಹಲಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದರು.
Published on

ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್​ ಬಳಿಗೆ ತಲುಪಿದ್ದರೂ ಇನ್ನೂ ಒಂದು ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ. ಇದೇ ವಿಚಾರವಾಗಿ ಪ್ರಬಲ ಆಕಾಂಕ್ಷಿಗಳಾಗಿರುವ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ದೆಹಲಿಯಲ್ಲಿದ್ದಾರೆ.

ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂದು ದೆಹಲಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಇದು ಸಿಎಂ ವಿಚಾರವಾಗಿ ಇಬ್ಬರ ನಡುವಿನ ಸ್ಪರ್ಧೆ ಬಿಗಿಯಾಗಿದೆ ಎಂಬ ಸುಳಿವನ್ನು ನೀಡಿದೆ.

ಮೊದಲಿಗೆ ಡಿ.ಕೆ.ಶಿವಕುಮಾರ್ ಐದು ಗಂಟೆ ಸುಮಾರಿಗೆ ಖರ್ಗೆಯವರ ಅಧಿಕೃತ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದು, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ಅದಕ್ಕಾಗಿ ತಮ್ಮ ಅಹವಾಲು ಮಂಡಿಸಿದರು. ಬಳಿಕ ಹೊರಗೆ ಬಂದ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.

ನಂತರ ಆರು ಗಂಟೆ ಸುಮಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು. ಅವರು ಕೂಡ ಸಿಎಂ ಸ್ಥಾನಾಕಾಂಕ್ಷಿಯಾಗಿ ತಮ್ಮ ಬೇಡಿಕೆಯನ್ನು ಖರ್ಗೆ ಮುಂದಿಟ್ಟರು. ಅಂತಿಮವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿ ಖರ್ಗೆ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಬಹುಶಃ ನಾಳೆ ಬೆಂಗಳೂರಿನಲ್ಲಿ ನಿರ್ಣಯ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net