

ನವದೆಹಲಿ: ಅಫ್ತಾಬ್ ಪೂನಾವಾಲಾನಿಂದ ಕೊಲೆಯಾದ ಶ್ರದ್ಧಾಳ 13 ಮೂಳೆ ಚೂರುಗಳನ್ನು ದೆಹಲಿ ಪೊಲೀಸರು ಮೆಹರೌಲಿ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದಾರೆ. ಲಿವ್-ಇನ್ ಸಂಬಂಧದಲ್ಲಿದ್ದ ಅಫ್ತಾಬ್, ಗೆಳತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಸಾಯಿಸಿ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ಲಾಟ್ನಲ್ಲಿ ಫ್ರಿಡ್ಜ್ನಲ್ಲಿಟ್ಟಿದ್ದ. ನಂತರ ಹಲವು ದಿನಗಳ ಕಾಲ ಅವುಗಳನ್ನು ಕಾಡಿನಲ್ಲಿ ಎಸೆದಿದ್ದ.
ಘೋರ ಕೃತ್ಯ ಬೆಳಕಿಗೆ ಬಂದು ಕಿರಾತಕನನ್ನು ಬಂಧಿಸಿದಾಗ ಆತ ಈ ವಿಚಾರ ಬಾಯ್ಬಿಟ್ಟಿದ್ದ. ಕಾಡಿನಲ್ಲಿ ಎಸೆದಿದ್ದ ದೇಹದ ಭಾಗಗಳ ಪತ್ತೆಗೆ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಪ್ರದೇಶದಲ್ಲಿ ದೊರೆತ 13 ಮೂಳೆಗಳಿಂದ ಸಂಗ್ರಹಿಸಿದ ಡಿಎನ್ಎ ಶ್ರದ್ಧಾಳ ತಂದೆ ವಿಕಾಸ್ರ ಡಿಎನ್ಎ ಸ್ಯಾಂಪಲ್ನೊಂದಿಗೆ ಸರಿಹೊಂದುತ್ತದೆ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದ ಅಫ್ತಾಬ್ ವಿರುದ್ಧ ಮಹತ್ವದ ಸಾಕ್ಷ್ಯ ಲಭಿಸಿದಂತಾಗಿದೆ. ಕೇಂದ್ರೀಯ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್ಎ ವಿಶ್ಲೇಷಣೆ ನಡೆಸಲಾಗಿತ್ತು.
ನವೆಂಬರ್ 12ರಂದು 28 ವರ್ಷದ ಅಫ್ತಾಬ್ನನ್ನು ಬಂಧಿಸಿದ ಮೇಲೆ ಕೊಲೆ ಕುರಿತು ಹೊರಬಂದಿದ್ದ ಘೋರ ವಿವರಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಆತ 27 ವರ್ಷದ ಶ್ರದ್ಧಾಳನ್ನು ಮೇ 18ರಂದು ಉಸಿರುಗಟ್ಟಿಸಿ ಕೊಂದಿದ್ದ. ದೇಹವನ್ನು ತುಂಡು ಮಾಡಿ ಸುಮಾರು ಮೂರು ವಾರ ಫ್ರಿಡ್ಜ್ನಲ್ಲಿಟ್ಟಿದ್ದ. ದೇಹದ ಭಾಗಗಳನ್ನು ವಿವಿಧೆಡೆ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಅರಣ್ಯ ಪ್ರದೇಶಗಳಲ್ಲಿ ಜಾಲಾಡಿದ್ದರು. ತಪ್ಪಿಹೋಗಿರುವ ಭಾಗಗಳನ್ನು ಪತ್ತೆಹಚ್ಚಲು ಮದಂಗೀರ್ನ ಒಂದು ಕೆರೆಯ ನೀರನ್ನೂ ಖಾಲಿ ಮಾಡಲಾಗಿತ್ತು.