ತಲೆಗೆ ಎಂ-ಸೀಲ್ ಹಚ್ಚಿಕೊಂಡು ಪೊಲೀಸ್ ಹುದ್ದೆ ದೈಹಿಕ ಪರೀಕ್ಷೆಗೆ ಬಂದ 'ಕುಳ್ಳಿ' ಸಿಕ್ಕಿಬಿದ್ದಿದ್ದು ಹೀಗೆ…!

Telangana woman uses M-Seal to look taller for police recruitment, gets disqualified
Published on

ತೆಲಂಗಾಣ: ಬಹುತೇಕ ಮಂದಿಗೆ ಪೊಲೀಸ್ ಆಗಬೇಕು, ಖಾಕಿ ಬಟ್ಟೆ ಧರಿಸಿ ಸಮಾಜಸೇವೆ ಮಾಡಬೇಕು ಎಂಬ ಕನಸು ಇರುತ್ತದೆ. ಅದರಂತೆ ಕಷ್ಟ ಪಟ್ಟು ಹಗಲಿರುಳು ಓದಿ, ದೈಹಿಕವಾಗಿ ಸಧೃಢರಾಗಿದ್ದ ಪೊಲೀಸ್ ಆಗುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಅನ್ಯಮಾರ್ಗದ ಮೂಲಕ ಪೊಲೀಸ್ ಆಗಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.

ಪೊಲೀಸ್ ಆಗಲು ದೈಹಿಕ ಸದೃಢತೆಯ ಜತೆಗೆ ಎತ್ತರವೂ ಬೇಕು. ಆದರೆ ಇಲ್ಲೊಬ್ಬ ಮಹಿಳೆ ತಾನು ಎತ್ತರ ಇಲ್ಲವೆಂದು ಗೊತ್ತಾಗಿ ವಂಚನೆಯ ದಾರಿಗಿಳಿದಿದ್ದಾಳೆ. ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಮಹಿಳಾ ಅಭ್ಯರ್ಥಿ ಎತ್ತರವಾಗಿ ಕಾಣಿಸಿಕೊಳ್ಳಲು ಕೂದಲಿನೊಳಗೆ ಎಂ-ಸೀಲ್ ಅಂಟಿಸಿಕೊಂಡು ಬಂದಿದ್ದಾಳೆ. ಎತ್ತರ ಮಾಪನದ ಸಮಯದಲ್ಲಿ ಕೂದಲಿನಲ್ಲಿ ಎಂ-ಸೀಲ್ ಅಂಟಿಸಿಕೊಂಡು ಬಂದಿರುವುದು ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಆಕೆಯನ್ನು ಪರೀಕ್ಷಿಸಿ ಅನರ್ಹಗೊಳಿಸಿದ್ದಾರೆ.

ಡಿಸೆಂಬರ್ 14 ಮಹಬೂಬ್‌ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿಗಾಗಿ ನಡೆದ ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಪರೀಕ್ಷೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಮಹಿಳಾ ಅಭ್ಯರ್ಥಿಯು ಎತ್ತರ ಅಳೆಯುವ ಎಲೆಕ್ಟ್ರಾನಿಕ್ ಸಾಧನದಲ್ಲಿ ನಿಂತಾಗ ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಎತ್ತರ ಪರೀಕ್ಷಿಸಲು ಆಕೆಯನ್ನು ನಿಲ್ಲಿಸಿದಾಗ ಎತ್ತರ ಸೆನ್ಸಾರ್ ಸ್ಪಂದಿಸಿಲ್ಲ. ಹೀಗಾಗಿ ಮಹಿಳಾ ಅಧಿಕಾರಿಯೊಬ್ಬರು ಅಭ್ಯರ್ಥಿಯ ತಲೆಯನ್ನು ಪರಿಶೀಲಿಸಿದಾಗ ಆಕೆಯ ಕೂದಲಿನ ಕೆಳಗೆ ಎಂ-ಸೀಲ್ ಪತ್ತೆಯಾಗಿದೆ ಎಂದು ಮಹಬೂಬ್‌ನಗರ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net