ಸಿನಿಮಾ ಪ್ರಮೋಷನ್​ ವೇಳೆ ಮದುವೆ ಕುರಿತು ಪ್ರಶ್ನೆ; ನಟಿ ಶ್ರದ್ಧಾ ಖಡಕ್ ರಿಪ್ಲೈಗೆ ಸುಸ್ತಾದ ಪಾಪರಾಜಿಗಳು

Shraddha Mody
Published on

ಮುಂಬೈಃ ಚಿತ್ರರಂಗದಲ್ಲಿ ಲವ್ ಅಫೇರ್​ ಮತ್ತು ಡೇಟಿಂಗ್​​ ಸುದ್ದಿಗಳಿಗೆ ಕಡಿಮೆ ಇಲ್ಲ ಎಂದು ಹೇಳಬಹುದಾಗಿದೆ.  ಹೀರೋಗಳು ಕೆಲವು ನಾಯಕಿಯರನ್ನು ಪ್ರೀತಿಸುತ್ತಿದ್ದಾರೆ ಮತ್ತು ಅವರು ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ನಾವು ಸಾಕಷ್ಟು ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇದನ್ನು ಈ ನಟ-ನಟಿಯರು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಪೂರಕವೆಂಬಂತೆ ಬಾಲಿವುಡ್​ ಬೆಡಗಿ ಶ್ರದ್ಧಾ ಕಪೂರ್​ ಬರಹಗಾರೊಬ್ಬರ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಬಿಟೌನ್​ ಗಲ್ಲಿಯಲ್ಲಿ ಹರಿದಾಡುತ್ತಿದ್ದು, ಅನಂತ್​ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ಈ ಇಬ್ಬರು ಜತೆಯಾಗಿ ಕಾಣಿಸಿಕೊಳ್ಳುವ ಮೂಲಕ ತಾವಿಬ್ಬರು ಡೇಟ್​ ಮಾಡುತ್ತಿರುವುದನ್ನು ಖಚಿತಪಡಿಸಿದ್ದರು.

ಬಾಲಿವುಡ್​ನ ಅನೇಕ ನಟಿಯರು ಮದುವೆ ಆಗುತ್ತಿದ್ದಾರೆ. ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಅಚ್ಚರಿ ನೀಡುತ್ತಿದ್ದಾರೆ. ಈಗಾಗಲೇ ಆಲಿಯಾ ಭಟ್​, ಪರಿಣೀತಿ ಚೋಪ್ರಾ, ಸೋನಾಕ್ಷಿ ಸಿನ್ಹಾ ಮುಂತಾದವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗಿರುವಾಗಲೇ ನಟಿ ಶ್ರದ್ಧಾ ಕಪೂರ್​ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ನಟಿ ಉತ್ತರಿಸಿದ್ದು, ಸಖತ್​ ವೈರಲ್​ ಆಗುತ್ತಿದೆ.

ರಾಜ್​ಕುಮಾರ್​ ರಾವ್​ ಹಾಗೂ ಶ್ರದ್ಧಾ ಕಪೂರ್​ ನಟನೆಯ ಸ್ತ್ರೀ-2 ಚಿತ್ರದ ಟ್ರೈಲರ್​ ಲಾಂಚ್ ಈವೆಂಟ್​ಗಾಗಿ ಸಿನಿಮಾ ತಂಡ ಒಂದು ಕಡೆ ಸೇರಿತ್ತು. ಈ ವೇಳೆ ನಟಿಗೆ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಶ್ರದ್ಧಾ ಆಕೆ ಸ್ತ್ರೀ.. ಇಷ್ಟಬಂದಾಗ ಮದುಮಗಳು ಆಗುತ್ತಾಳೆ ಎಮದು ಹೇಳುವ ಮೂಲಕ ಸದ್ಯಕ್ಕೆ ತಾವು ಮದುವೆಯಾಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಮದುವೆ ಸುದ್ದಿಗೆ ತೆರೆ ಎಳೆದಿದ್ದಾರೆ.

ರಾಜ್​ಕುಮಾರ್​ ರಾವ್​-ಶ್ರದ್ಧಾ ಕಪೂರ್ ನಟನೆಯ ಸ್ತ್ರೀ-2 ಚಿತ್ರವು 2018ರಲ್ಲಿ ಬಿಡುಗಡೆಯಾದ ಮೊದಲ ಅವತರಣಿಕೆಯ ಮುಂದುವರೆದ ಭಾಗವಾಗಿದ್ದು, ಚಿತ್ರವು ಆಗಷ್ಟ್​​ 15ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಚಿತ್ರಕ್ಕೆ ದಿನೇಶ್​ ವಿಜನ್​ ಬಂಡವಾಳ ಹೂಡಿದ್ದು, ಮೊದಲ ಅವತರಣಿಕೆಯಂತೆ ಎರಡನೇ ಭಾಗವು ಹಿಟ್​ ಆಗುತ್ತದೆ ಎಂದು ಚಿತ್ರತಂಡ ನಿರೀಕ್ಷೆ ಇಟ್ಟುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net