

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಕರ್ನಾಟಕ ಸರ್ಕಾರದ ಹೊಸ ಮಸೂದೆಗೆ ಖಾಸಗಿ ಕಂಪನಿಗಳು ವಿರೋಧ ವ್ಯಕ್ತಪಡಿಸಿ ಹಿನ್ನೆಲೆ ಅದನ್ನು ತಡೆ ಹಿಡಿಯಲಾಗಿದ್ದು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಕಾಮೆಂಟ್ ಮಾಡಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.
ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ #UnistallPhonePe, #Boycott PhonePe ಎಂಬ ಅಭಿಯಾನವನ್ನು ನಡೆಸಲಾಗುತ್ತಿದ್ದು, ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನು ಕನ್ನಡಿಗರಿಗೆ ಮೀಸಲಾತಿ ಕಾಯ್ದೆಗೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವರು ಕಿಡಿಕಾರಿದ್ದಾರೆ.
ನನಗೆ ಈಗ 46 ವರ್ಷ. 15 ವರ್ಷಕ್ಕಿಂತ ಹೆಚ್ಚು ಕಾಲ ಯಾವ ರಾಜ್ಯಗಳಲ್ಲಿಯೂ ಉಳಿದಿಲ್ಲ. ಫೋನ್ ಪೇ ಕಂಪನಿಯು ದೇಶದ ಬಹುತೇಕ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದೆ. ನಮ್ಮ ತಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ದೇಶದ ಎಲ್ಲಾ ಕಡೆಯಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ. ಅಂಥ ಯೋಧ - ದೇಶಕ್ಕಾಗಿ ದುಡಿದ ನನ್ನ ಮಗನಿಗೆ ಕರ್ನಾಟಕದಲ್ಲಿ ಕೆಲಸ ಕೊಡೋದಿಲ್ಲವೇ ಎಂದು ಕೇಳುತ್ತಿದ್ದಾರೆ. ಇದಕ್ಕೆ ಕರ್ನಾಟಕ ಏನು ಉತ್ತರ ಕೊಡುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.
ನಾನು ಭಾರತೀಯ. ನಾನು ಯಾವುದೇ ರಾಜ್ಯದಲ್ಲಿ ಹೋಗಿ ಕೆಲಸ ಮಾಡಬಲ್ಲೆ. ಅದು ನನ್ನಿಷ್ಟ. ನಾನು ನನಗೆ ಬೇಕು ಎನ್ನಿಸಿದ ಭಾಷೆಯನ್ನು ಕಲಿಯಬಲ್ಲೆ. ಅದೂ ಸಹ ನನ್ನಿಷ್ಟ. ಎಲ್ಲಿ ಬೇಕಾದರೂ ಹೋಗಿ ಕೆಲಸ ಮಾಡುವ ಹಾಗೂ ಯಾವ ಭಾಷೆಯನ್ನಾದರೂ ಕಲಿಯುವಂಥ ಸ್ವಾತಂತ್ರ್ಯವನ್ನು ನನ್ನ ದೇಶದ ಸಂವಿಧಾನ ನನಗೆ ನೀಡಿದೆ ಎಂದು ಫೋನ್ಪೇ ಸಿಇಒ ಸಮೀರ್ ನಿಗಮ್ ಟ್ವೀಟ್ ಮಾಡಿ ವಿವಾದದ ಕಿಡಿ ಹೊತ್ತಿಸಿದ್ದರು.
ಇತ್ತ ಸಮೀರ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಹಲವರು ಕಿಡಿಕಾರಿದ್ದು, ಇಷ್ಟರಲ್ಲೇ ನಿಮ್ಮ ಕಂಪನಿ ಮುಚ್ಚಿ ಹೋಗುತ್ತದೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡಿ ಎಂದು ನೆಟ್ಟಿಗರು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.