

ಬೆಂಗಳೂರು: ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನೂತನ ಕೋಚ್ ಗೌತಮ್ ಗಂಭೀರ್ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸುತ್ತಿದ್ದಂತೆ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತಿವಾಗುತ್ತಿದ್ದು, ಹಲವರು ನೂತನ ಕೋಚ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಸದಸ್ಯರ ನಡೆಗೆ ಕಿಡಿಕಾರಿದ್ದಾರೆ.
ಇತ್ತೀಚಿಗೆ ಜಿಂಬಾಬ್ವೆ ವಿರುದ್ಧ ಮುಕ್ತಾಯಗೊಂಡ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡದೆ ಇರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಕುರಿತು ಕರ್ನಾಟಕ ಮೂಲದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಪ್ರಶ್ನಿಸಿದ್ದು, ಆಯ್ಕೆ ಸಮಿತಿಯ ನಡೆಗೆ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಏಕದಿನ ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಬದಲಿಗೆ ಶಿವಂ ದುಬೆ ಅವರನ್ನು ಆಯ್ಕೆ ಮಾಡಿರುವುದನ್ನು ನೋಡಿದರೆ ಹಾಸ್ಯಾಸ್ಪದವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಈತ ಶತಕ ಗಳಿಸಿ ತಂಡಕ್ಕೆ ಆಸರೆಯಾಗಿದ್ದ. ಆದರೆ, ಆತನನ್ನು ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ಹೃದಯ ಆತನಿಗಾಗಿ ಮಿಡಿಯುತ್ತದೆ ಎಂದು ಕರ್ನಾಟಕ ಮೂಲದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಗೆ ಅವರನ್ನು ಖಂಡಿತವಾಗಿಯೂ ಆಯ್ಕೆ ಮಾಡಲಾಗುತ್ತದೆ ಎಂದು ಮಾತು ಕ್ರೀಡಾ ವಲಯದಲ್ಲಿ ಕೇಳಿ ಬರುತ್ತಿದೆ. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿಗೊಂಡಿರುವ ಕಾರಣ ಸಂಜುರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗಿದೆ.