

ನವದೆಹಲಿ: ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿಯನ್ನು ಹತ್ಯೆಗೈದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ, ತನ್ನ ಮುಂದಿನ ಟಾರ್ಗೆಟ್ ಅನ್ನು ಬಾಲಿವುಡ್ ಹಿರಿಯ ನಟ ಸಲ್ಮಾನ್ ಖಾನ್ ಮೇಲಿಟ್ಟಿದ್ದ. ಈ ಹಿನ್ನೆಲೆ ನಟನ ಕೊಲೆ ಸಂಚಿಗೆ ದೊಡ್ಡ ಬೇಡಿಕೆಯಿಟ್ಟಿದ್ದ ಲಾರೆನ್ಸ್ ಗ್ಯಾಂಗ್, ಬರೋಬ್ಬರಿ 25 ಲಕ್ಷ ರೂ. ಹಣದ ಜತೆಗೆ ನಾನಾ ಬಗೆಯ ಗನ್ಗಳ ಮೊರೆ ಹೋಗಿತ್ತು ಎಂಬುದು ಇದೀಗ ಮುಂಬೈ ಪೊಲೀಸರು ಸಲ್ಲಿಸಿರುವ ಚಾರ್ಚ್ಶೀಟ್ನಲ್ಲಿ (Chargesheet) ಉಲ್ಲೇಖವಾಗಿದೆ.
ಈ ಹಿಂದಿನಿಂದಲೂ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬಕ್ಕೆ ಹಲವಾರು ಬಾರಿ ಎಚ್ಚರಿಕೆಯ ಸಂದೇಶ ನೀಡಿದ್ದ ಗ್ಯಾಂಗ್, ನಟನ ಕುಟುಂಬಸ್ಥರಿಗೆ ಹಾಗೂ ಪ್ರೀತಿ ಪಾತ್ರರಿಗೆ ತೊಂದರೆ ತಪ್ಪಿದ್ದಲ್ಲ ಎಂದು ಪದೇ ಪದೇ ಎಚ್ಚರಿಸಿತ್ತು. ಇಂತಹ ಬೆದರಿಕೆಗಳ ಬೆನ್ನಲ್ಲೇ ಸಲ್ಮಾನ್ ಖಾನ್ ಮತ್ತು ಅವರ ನಿವಾಸಕ್ಕೆ ಸರ್ಕಾರದಿಂದ ಬಿಗಿ ಭದ್ರತೆಯನ್ನು ಒದಗಿಸಲಾಯಿತು. ಸಲ್ಲು ಅವರನ್ನು ಅವರ ಫಾರ್ಮ್‌ಹೌಸ್ ಬಳಿ ಹತ್ಯೆಗೈಯಲು ಸಂಚು ಹೂಡಿದ್ದ ಗ್ಯಾಂಗ್, ನಟನ ಕೊಲೆಗೆ 25 ಲಕ್ಷ ರೂ. ಹಣ ಮತ್ತು ಪಾಕಿಸ್ತಾನದಿಂದ ಎಕೆ 47, ಎಕೆ 92 ಮತ್ತು ಎಂ 16 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಟರ್ಕಿಯಲ್ಲಿ ತಯಾರಿಸಿದ ಜಿಗಾನಾ ಬಂದೂಕನ್ನು ಖರೀದಿಸಲು ಸಿದ್ಧತೆ ನಡೆಸಿದ್ದರು ಎಂಬುದು ಚಾರ್ಚ್ಶೀಟ್ನಲ್ಲಿ ಉಲ್ಲೇಖಗೊಂಡಿದೆ.
ಆರೋಪ ಪಟ್ಟಿಯಲ್ಲಿ ಐದು ಜನರನ್ನು ಹೆಸರಿಸಿರುವ ಪೊಲೀಸರು, ಈ ಐವರು ಜೈಲಿನಲ್ಲಿರುವ ಕಿಲ್ಲರ್ ಲಾರೆನ್ಸ್ ಬಿಷ್ಣೋಯ್ ನೇತೃತ್ವದ ಗ್ಯಾಂಗ್ ಸೇರಿದವರು ಹಾಗೂ ಸಲ್ಮಾನ್ ಖಾನ್ ಹತ್ಯೆಗೈಯಲು ಗುತ್ತಿಗೆ ಪಡೆದವರು ಎಂದು ತಿಳಿಸಿದ್ದಾರೆ. ಆರೋಪಿಗಳು ಪಾಕಿಸ್ತಾನದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ 47, ಎಕೆ 92 ಮತ್ತು ಎಂ 16 ಮತ್ತು ಟರ್ಕಿ ನಿರ್ಮಿತ ಜಿಗಾನಾ ಗನ್ ಅನ್ನು ಖರೀದಿಸಲು ಸಿದ್ಧತೆ ನಡೆಸಿದ್ದರು. ಸಲ್ಮಾನ್ ಅವರನ್ನು ಕೊಲ್ಲಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರನ್ನು ಬಿಷ್ಣೋಯಿ ನೇಮಕ ಮಾಡಿಕೊಂಡಿದ್ದ ಎನ್ನಲಾಗಿದೆ. ಇಂದು ಹರಿಯಾಣದಲ್ಲಿ ಅರೆಸ್ಟ್ ಆದ ಆರೋಪಿ ಸಕ್ಕಾ ಎಂಬಾತನನ್ನು ಹೊರತುಪಡಿಸಿದರೆ ಉಳಿದವರೆಲ್ಲ ಪುಣೆ, ರಾಯಗಡ, ನವಿ ಮುಂಬೈ, ಥಾಣೆ ಮತ್ತು ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುಮಾರು 60ರಿಂದ 70 ಜನರು ಸಲ್ಮಾನ್ ಖಾನ್ ಅವರ ಚಲನವಲನವದ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದಾರೆ. ವಿಶೇಷವಾಗಿ ಅವರ ಬಾಂದ್ರಾ ಮನೆ, ಪನ್ವೆಲ್ ಫಾರ್ಮ್‌ಹೌಸ್ ಮತ್ತು ಗೋರೆಗಾಂವ್ ಫಿಲ್ಮ್ ಸಿಟಿಯತ್ತ ಹೆಚ್ಚು ಗಮನಿಸುತ್ತಿದ್ದಾರೆ. ಇದಲ್ಲದೆ, ಆರೋಪಪಟ್ಟಿ ಪ್ರಕಾರ ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಯೋಜನೆಯನ್ನು ಆಗಸ್ಟ್ 2023 ಮತ್ತು ಏಪ್ರಿಲ್ 2024ರ ಮಧ್ಯೆ ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).