

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ವಿಭಿನ್ನ, ವಿಶೇಷ ಹಾಗೂ ವಿಚಿತ್ರ ಕಾರಣಗಳಿಂದ ಬಹಳ ಬೇಗನೆ ವೈರಲ್ ಆಗುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಕೆಲ ದಿನಗಳಿಂದ ಸುತ್ತಾಡುತ್ತಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ ಪತ್ನಿಯೊಬ್ಬಳು ತನ್ನ ಗಂಡನಿಗೆ ವಂಚನೆ ಮಾಡುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದಕ್ಕೆ ಸಂಬಂಧಿಸಿದೆ. ಶೋನೀಕಪೂರ್ ಎಂಬುವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈವರೆಗೂ ಈ ವಿಡಿಯೋ 2 ಕೋಟಿ 90 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಮಾಲ್ ಒಂದರಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ಕೈಹಿಡಿದು ಸಾಗುತ್ತಿರುತ್ತಾಳೆ. ಆತ ಆಕೆಯ ಬಾಯ್ಫ್ರೆಂಡ್ ಎನ್ನಲಾಗಿದೆ. ಹಿಂದಿನಿಂದ ಮಹಿಳೆಯ ಪತಿ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬರುತ್ತಿರುತ್ತಾನೆ. ಮಹಿಳೆ ಮತ್ತು ಬಾಯ್ಫ್ರೆಂಡ್ ಶಾಪ್ ಒಂದರ ಮುಂದೆ ನಿಂತುಕೊಂಡಾಗ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಮಹಿಳೆಗೆ ಬೇರೊಬ್ಬರು ತಿಳಿಸುತ್ತಾರೆ. ಆಕೆ ಹಿಂದೆ ತಿರುಗಿ ನೋಡಿದಾಗ ವಿಡಿಯೋ ಮಾಡುತ್ತಿರುವುದು ತನ್ನ ಗಂಡನೆಂದು ತಿಳಿಯುತ್ತದೆ ಮತ್ತು ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಾರೆ.
ಆರಂಭದಲ್ಲಿ ತನ್ನ ಜತೆ ಇರುವ ವ್ಯಕ್ತಿ ಫ್ರೆಂಡ್ ಎಂದು ಮಹಿಳ ವಾದಿಸುತ್ತಾಳೆ. ಇಬ್ಬರು ಕೈ ಕೈ ಹಿಡಿದು ಸುತ್ತಾಡಿರುವುದನ್ನು ರೆಕಾರ್ಡ್ ಮಾಡಿರುವುದನ್ನು ಗಂಡ ತಿಳಿಸಿದಾಗ ಕೋಪಗೊಳ್ಳುವ ಮಹಿಳೆ ಮೊಬೈಲ್ ಕಿತ್ತುಕೊಂಡು ಗಂಡನ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾಳೆ. ಪತಿ-ಪತ್ನಿ ಇಬ್ಬರದ್ದು ಪ್ರೇಮ ವಿವಾಹ. ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡ ಬಗ್ಗೆ ಮಾತನಾಡಿರುವುದು ವಿಡಿಯೋ ಸಂಭಾಷಣೆಯಲ್ಲಿದೆ.
ಇಬ್ಬರ ನಡುವಿನ ಮಾತಿನ ಚಕಮಕಿ ಜೋರಾದಾಗ ಅಕ್ಕಪಕ್ಕದಲ್ಲಿದ್ದವರು ಅಲ್ಲಿ ತುಂಬಿಕೊಳ್ಳುತ್ತಾರೆ. ಕೋರ್ಟಿಗೆ ಬಾ ಡಿವೋರ್ಸ್ ಕೊಡುತ್ತೇನೆ ಎಂದು ಗಂಡ ಹೇಳುತ್ತಾನೆ. ಪತ್ನಿ ಕೂಡ ತನಗೆ ಏನು ಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿ ವಿಚ್ಛೇದನ ಕೊಡುವುದಾಗಿ ತಿಳಿಸುತ್ತಾಳೆ. ಅವರಿಬ್ಬರೂ ತಮ್ಮ ಸಂಬಂಧಿಕರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾರೆ ಮತ್ತು ಕೆಲವು ದಿನಗಳವರೆಗೆ ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಳು ಎಂದು ಪತ್ನಿಯ ವಿರುದ್ಧ ಪತಿ ಆರೋಪ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ತುಂಬಾ ಕೆಟ್ಟ ಪದಗಳಿಂದ ಇಬ್ಬರು ಸಾರ್ವಜನಿಕವಾಗಿಯೇ ಬೈದಾಡಿಕೊಂಡಿದ್ದಾರೆ. ವಿಡಿಯೋ ನೋಡುವಾಗ ಆದಷ್ಟು ಹೆಡ್ಫೋನ್ ಬಳಸಿ ನೋಡುವುದು ಉತ್ತಮ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಗಂಡ ವಿಪರೀತ ನಿಂದನೀಯ ಭಾಷೆ ಬಳಸಿದ್ದಾರೆ. ಆದರೆ ಹೆಂಡತಿ ಪರಪುರುಷನೊಂದಿಗೆ ಸುತ್ತಾಡುವುದನ್ನು ಕಣ್ಣಾರೆ ಕಂಡ ಪತಿ ತನ್ನ ಹತಾಶೆಯನ್ನು ಹೊರತೆಗೆಯುವುದನ್ನು ಬಿಟ್ಟು ಬೇರೆ ಏನು ಮಾಡುತ್ತಾನೆ? ಬೇರೆ ಹೆಣ್ಣಿನ ಜೊತೆ ಗಂಡ ಸಿಕ್ಕಿಬಿದ್ದಾಗ ಪತ್ನಿ ತನ್ನ ಗಂಡನಿಗೆ ಹೊಡೆಯುವುದನ್ನು ನೋಡಿದ್ದೇವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇನ್ನು ಈ ವಿಡಿಯೋ ಅಧಿಕೃತತೆ ಬಗ್ಗೆ ಸಂದೇಹವಿದೆ. ವಿಡಿಯೋದಲ್ಲಿ ಇರುವವರ ಗುರುತು ಮತ್ತು ಈ ಘಟನೆ ಎಲ್ಲಿ ನಡೆಯಿತು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೆಟ್ಟಿಗರನ್ನು ಗಮನ ಸೆಳೆದಿದೆ. (ಏಜೆನ್ಸೀಸ್)