

IPS : ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಆಂಧ್ರಪ್ರದೇಶ ಸರ್ಕಾರ ಉನ್ನತ ಭದ್ರತೆಯನ್ನು ನೀಡಿದೆ. ಪ್ರಸ್ತುತ ಅವರಿಗೆ ಗೃಹ ಇಲಾಖೆ ಮತ್ತು ಗುಪ್ತಚರ ಸಂಸ್ಥೆಯು ವೈ ಕೆಟಗರಿ ಭದ್ರತೆಯನ್ನು ನೀಡಿದೆ. ಆದಾಗ್ಯೂ, ಪವನ್ ಕಲ್ಯಾಣ್ ಅವರು ಕಳೆದ ವಾರ ಪಾರ್ವತಿಪುರಂ ಮಾನ್ಯ ಜಿಲ್ಲೆಗೆ ಪ್ರವಾಸವನ್ನು ಕೈಗೊಂಡಿದ್ದ ಸಂದರ್ಭದಲ್ಲಿ ಅಪಾಯಕಾರಿ ಘಟನೆಯೊಂದು ನಡೆದಿದೆ.
ಡಿಸಿಎಂ ಪವನ್ ಕಲ್ಯಾಣ್ ಅವರು ಪಾರ್ವತಿ ಪುರಂ ಪ್ರದೇಶದಲ್ಲಿ ಪ್ರವಾಸದಲ್ಲಿದ್ದಾಗ, ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವೇಳೆ ಪವನ್ ಕಲ್ಯಾಣ್ ಪಕ್ಕದಲ್ಲಿಯೇ ಐಪಿಎಸ್ ಅಧಿಕಾರಿಯೊಬ್ಬರು ಕಾಣಿಸಿಕೊಂಡರು. ಪವನ್ ಕಲ್ಯಾಣ್ ಇರುವ ಎಲ್ಲ ಫೋಟೋದಲ್ಲೂ ಐಪಿಎಸ್ ಅಧಿಕಾರಿ ನಗು ನಗುತ್ತಾ ಪೋಸ್ ನೀಡಿದ್ದಾರೆ. ಆಶ್ಚರ್ಯಕರ ಸಂಗತಿ ಏನೆಂದರೆ, ಕೆಲವು ಪೊಲೀಸ್ ಪೇದೆಗಳು ಕೂಡ ಐಪಿಎಎಸ್ ಅಧಿಕಾರಿಯ ಜತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.
ಇದರಲ್ಲೇನಿದೆ ವಿಶೇಷ, ಅವರೊಬ್ಬ ದಕ್ಷ ಐಪಿಎಸ್ ಅಧಿಕಾರಿ ಇರಬಹುದು. ಹೀಗಾಗಿ ವಿಶೇಷವಾಗಿ ಗಮನ ಸೆಳೆದಿದ್ದಾರೆ ಎಂದು ನಿಮಗೆ ಅನಿಸಬಹುದು. ಆದರೆ, ಈ ಕತೆಯಲ್ಲಿ ಅಸಲಿ ಟ್ವಿಸ್ಟ್ ಇಲ್ಲಿದೆ. ಅದೇನೆಂದರೆ, ಆ ಐಪಿಎಸ್ ಅಧಿಕಾರಿ ಅಸಲಿಯಲ್ಲ ನಕಲಿ. ಗೊತ್ತಾಗಿದ್ದು ಹೇಗೆ ಎಂದರೆ, ಫೋಟೋಗಳು ವೈರಲ್ ಆಗಿ ಪೊಲೀಸ್ ಇಲಾಖೆಯ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋಗಳಲ್ಲೂ ವಿಚಿತ್ರವಾಗಿ ವರ್ತಿಸಿರುವುದು ಕಂಡುಬಂದಿದ್ದು, ಆ ವ್ಯಕ್ತಿ ಐಪಿಎಸ್ ಅಧಿಕಾರಿ ಅಲ್ಲ ಮತ್ತು ಪೊಲೀಸ್ ಇಲಾಖೆಯ ಭಾಗವೂ ಅಲ್ಲ ಎಂದು ಗೊತ್ತಾಗಿದೆ. ಆತ ನಕಲಿ ಸಮವಸ್ತ್ರ ಮತ್ತು IPS ಬ್ಯಾಡ್ಜ್ನೊಂದಿಗೆ ಬಂದು, ಪವಾನ್ ಕಲ್ಯಾಣ ಪಕ್ಕದಲ್ಲೇ ಸುಳಿದಾಡಿರುವುದು ಕಂಡುಬಂದಿದೆ.
ನಕಲಿ ಅಧಿಕಾರಿಯನ್ನು ಸೂರ್ಯಪ್ರಕಾಶ್ ಎಂದು ಗುರುತಿಸಲಾಗಿದೆ. ಈತ ವಿಜಯನಗರ ಜಿಲ್ಲೆಯ ದತ್ತಿರಾಜೇರು ಮಂಡಲದ ಗಡಸಂ ಮೂಲದ ನಿವಾಸಿ. ಸೂರ್ಯಪ್ರಕಾಶ್ ಅವರು 2003 ರಿಂದ 2005ರವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಅಲ್ಲಿಂದ ಮರಳಿದ ಬಳಿಕ ಬೊಬ್ಬಿಲಿಯಲ್ಲಿ ಬಿ.ಟೆಕ್ ಹಾಗೂ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಕೂಡ ಮಾಡಿದ್ದಾರೆ. ಈತ ಕೆಲವು ದಿನಗಳ ನಂತರ ಹೈದರಾಬಾದ್‌ಗೆ ತೆರಳಿದರು. ಅವರ ತಂದೆ ತವಿಟಿ ಬಾಬು 2020ರಲ್ಲಿ ನಿಧನರಾದ ನಂತರ, ಅವರು ಜಮೀನನ್ನು ಪಡೆಯುವ ಸಲುವಾಗಿ ನಕಲಿ ಐಪಿಎಸ್ ಅಧಿಕಾರಿಯ ಅವತಾರವನ್ನು ಪಡೆದರು.
2024ರಲ್ಲಿ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡರು. ಹೈದರಾಬಾದ್‌ನ ಖಾಸಗಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಸಮವಸ್ತ್ರ ಹೊಲಿಸಿ, ನಕಲಿ ಗುರುತಿನ ಚೀಟಿಯನ್ನು ತಯಾರಿಸಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ. ಆರು ತಿಂಗಳ ಹಿಂದೆ ಸೂರ್ಯಪ್ರಕಾಶ್ ವಿಜಯನಗರಕ್ಕೆ ಮರಳಿದ್ದರು. ಇದೇ ತಿಂಗಳ 20ರಂದು ಪವನ್ ಕಲ್ಯಾಣ್ ಭೇಟಿ ವೇಳೆ ಪಾನಸಭದ್ರಕ್ಕೆ ತೆರಳಿದ್ದರು. ಅಲ್ಲಿ ವಿಐಪಿಗಳ ಜೊತೆ ಫೋಟೋ ಸಹ ತೆಗೆಸಿಕೊಂಡರು. ಅದರಲ್ಲಿ ಕೆಲವನ್ನು ವಾಟ್ಸಾಪ್ ಸ್ಟೇಟಸ್ಗಳಾಗಿ ಹಾಕಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ.
ಸೂರ್ಯ ಪ್ರಕಾಶ್ನನ್ನು ಬಂಧಿಸಲಾಗಿದ್ದು, ಆತನಿಂದ ಎರಡು ನಕಲಿ ಗುರುತಿನ ಚೀಟಿ, ಸಮವಸ್ತ್ರ, ಕಾರು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ದಿಲೀಪ್ ಕಿರಣ್ ತಿಳಿಸಿದ್ದಾರೆ. (ಏಜೆನ್ಸೀಸ್)