

OYO Rooms : ಇನ್ನು ಕೆಲವೇ ದಿನಗಳಲ್ಲಿ 2024ನೇ ವರ್ಷವು ಕೊನೆಗೊಳ್ಳಲಿದ್ದು, 2025ನೇ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ದೇಶದ ಜನರು ತುದಿಗಾಲಲ್ಲಿ ನಿಂತಿದ್ದಾರೆ. ವರ್ಷಾಂತ್ಯ ಸಂಭವಿಸಿರುವ ಹಿನ್ನೆಲೆಯಲ್ಲಿ ಓಯೋ ಕಂಪನಿ ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ಓಯೋ ರೂಮ್ ಬುಕ್ಕಿಂಗ್ ನಡೆದಿರುವ ನಗರಗಳ ಹೆಸರನ್ನು ಬಹಿರಂಗಪಡಿಸಿದೆ.
ಟ್ರಾವೆಲೋಪೀಡಿಯಾ 2024 ವರದಿಯ ಪ್ರಕಾರ, ಈ ವರ್ಷ ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪುರಿ, ವಾರಣಾಸಿ ಮತ್ತು ಹರಿದ್ವಾರಗಳು ಪ್ರಮುಖ ಆಧ್ಯಾತ್ಮಿಕ ತಾಣಗಳಾಗಿ ಹೊರಹೊಮ್ಮಿವೆ. ಇವರೊಂದಿಗೆ ದಿಯೋಘರ್, ಪಳನಿ ಮತ್ತು ಗೋವರ್ಧನ್ ಕೂಡ ಗಮನಾರ್ಹ ಬೆಳವಣಿಗೆಯನ್ನು ಕಂಡಿವೆ.
ಇದೇ ಸಂದರ್ಭದಲ್ಲಿ ರೂಮ್ ಬುಕ್ಕಿಂಗ್ ವಿಚಾರದಲ್ಲಿ ಹೈದರಾಬಾದ್ ನಗರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ, ಬೆಂಗಳೂರು, ದೆಹಲಿ ಮತ್ತು ಕೋಲ್ಕತ್ತದಂತಹ ನಗರಗಳು ಕೂಡ ಅಗ್ರಸ್ಥಾನದಲ್ಲಿವೆ. ಉತ್ತರ ಪ್ರದೇಶವು ಪ್ರಯಾಣಿಸಲು ಅತ್ಯಂತ ಜನಪ್ರಿಯ ರಾಜ್ಯವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಕರ್ನಾಟಕ ಪ್ರವಾಸೋದ್ಯಮಕ್ಕೆ ಸೂಕ್ತವಾದ ಪ್ರವಾಸಿ ತಾಣಗಳಾಗಿವೆ.
ಪಟನಾ, ರಾಜಮಂಡ್ರಿ ಮತ್ತು ಹುಬ್ಬಳ್ಳಿಯಂತಹ ಸಣ್ಣ ನಗರಗಳಲ್ಲಿ ಬುಕ್ಕಿಂಗ್ ಈ ವರ್ಷ ಶೇ. 48 ರಷ್ಟು ಹೆಚ್ಚಾಗಿದೆ. ಈ ವರ್ಷ ರಜಾದಿನಗಳಲ್ಲಿ ಪ್ರಯಾಣ ಚಟುವಟಿಕೆಯೂ ಹೆಚ್ಚಾಗಿದೆ. ಗೋವಾ, ಪುದುಚೇರಿ ಮತ್ತು ಮೈಸೂರು ಹಾಗೂ ಜೈಪುರವು ಪ್ರವಾಸಿ ಕೇಂದ್ರವಾಗಿ ಮುಂದುವರೆದಿದೆ. ಆದರೆ, ಅಚ್ಚರಿಯ ಸಂಗತಿ ಏನೆಂದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಓಯೋ ರೂಮ್ ಬುಕ್ಕಿಂಗ್ ಕಡಿಮೆಯಾಗಿದೆ ಎಂದು ಓಯೋ ಹೇಳಿದೆ.
ಈ ಬಗ್ಗೆ ಓಯೋ ಗ್ಲೋಬಲ್ ಮುಖ್ಯ ಸೇವಾ ಅಧಿಕಾರಿ ಶ್ರೀರಂಗ್ ಗೋಡ್ಬೋಲೆ ಮಾತನಾಡಿ, ಈ ವರ್ಷ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗೊಂಡಿದೆ. ಕೆಲಸದ ಒತ್ತಡ ಮತ್ತಿತರ ಕಾರಣಗಳಿಂದ ಮಾನಸಿಕ ನೆಮ್ಮದಿಗಾಗಿ ಹಲವರು ತಮ್ಮ ನೆಚ್ಚಿನ ತಾಣಗಳಿಗೆ ತೆರಳಿದ್ದಾರೆ ಎಂದರು.
ಅಂದಹಾಗೆ 2012ರಲ್ಲಿ ಸ್ಥಾಪನೆಯಾದ ಓಯೋ ಭಾರತೀಯ ಸ್ಟಾರ್ಟ್ಅಪ್ ಕಂಪನಿಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಈಗ, ನೀವು ಎಲ್ಲಿಗೆ ಹೋದರೂ, ನೀವು ಓಯೋ ಕೊಠಡಿಗಳನ್ನು ಕಾಣಬಹುದು. ಹೊಸ ಜಾಗಕ್ಕೆ ಹೋದಾಗ ರಾತ್ರಿ ಉಳಿಯಬೇಕಾದರೆ ಓಯೋ ನೆನಪಿಗೆ ಬರುತ್ತೆ. ಈ ಸ್ಟಾರ್ಟ್ಅಪ್ ಕಡಿಮೆ ಸಮಯದಲ್ಲಿ ತುಂಬಾ ಜನಪ್ರಿಯತೆ ಗಳಿಸಿದೆ. ಇದರ ಹಿಂದೆ ಯುವಕನೊಬ್ಬನ ಪರಿಶ್ರಮ ಅಡಗಿದೆ. ಅವರೇ ರಿತೇಶ್ ಅಗರ್ವಾಲ್. ಅವರು ಪ್ರಸ್ತುತ ಓಯೋದ ಸಿಇಒ ಆಗಿದ್ದಾರೆ. (ಏಜೆನ್ಸೀಸ್)