ಕರೊನಾ ನಡುವೆ ಮದ್ಯದ ಅಮಲು ಬೇಕಿತ್ತಾ?: ಕೇಂದ್ರದ ವಿರುದ್ಧ ಸಂಜಯ್​ ರಾವತ್​ ಟೀಕಾಸ್ತ್ರ

Sanjay Raut
Published on

ಮುಂಬೈ: ಕರೊನಾ ವೈರಸ್​ ವಿಚಾರದಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ಸದಾ ಟೀಕಿಸುವ ಶಿವಸೇನಾ ನಾಯಕ ಸಂಜಯ್​ ರಾವತ್​ ಅವರು ಮತ್ತೊಮ್ಮೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಕೇವಲ 20 ಮಂದಿ ಮಾತ್ರ ಭಾಗವಹಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದ್ದನ್ನು ಖಂಡಿಸಿದ್ದಾರೆ. ಶವಸಂಸ್ಕಾರದಲ್ಲಿ 20 ಮಂದಿ ಮಾತ್ರ ಪಾಲ್ಗೊಳ್ಳಬೇಕಂತೆ ಆದರೆ, ವೈನ್​ ಶಾಪ್​ನಲ್ಲಿ ಸಾವಿರಾರು ಮಂದಿ ಒಟ್ಟಿಗೆ ಸೇರುವುದು ಎಷ್ಟರ ಮಟ್ಟಿಗೆ ಸರಿಯೆಂದು ಪ್ರಶ್ನಿಸಿದ್ದಾರೆ.

ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿರುವ ರಾವತ್​, ಅಂತ್ಯಕ್ರಿಯೆಲ್ಲಿ ಪಾಲ್ಗೊಳ್ಳಲು ಸರ್ಕಾರ 20 ಮಂದಿಗೆ ಮಾತ್ರ ಅವಕಾಶ ನೀಡಿದೆ. ಏಕೆಂದರೆ, ಮೃತದೇಹದಲ್ಲೇ ಆತ್ಮವೇ ಇರುವುದಿಲ್ಲ. ವೈನ್​ ಶಾಪ್​ ಬಳಿ ಸಾವಿರಾರು ಮಂದಿ ಸೇರಬಹುದು ಏಕೆಂದರೆ ಶಾಪ್​ಗಳಲ್ಲಿ ಆತ್ಮಗಳಿರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ದೀಪ ಬೆಳಗಿಸಿ ಎಂದು ಕರೆ ನೀಡಿದ್ದನ್ನು ಟೀಕಿಸಿ ಸರ್ಕಾರ ಕೋವಿಡ್​-19 ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದರು.

ಇನ್ನು ಸರ್ಕಾರ ಮದ್ಯ ಮಾರಾಟಕ್ಕೆ ಅನುವು ನೀಡಿರುವುದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಲಾಕ್​ಡೌನ್​ ಸಡಿಲಿಕೆ ಬೆನ್ನಲ್ಲೇ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಮದ್ಯಕ್ಕಾಗಿ ಕುಡುಕರು ಮುಗಿಬೀಳುತ್ತಿರುವುದು ಸಹ ಕಳವಳಕ್ಕೆ ಕಾರಣವಾಗಿದೆ. ವಿಪರ್ಯಾಸವೆಂದರೆ ಮದ್ಯಾ ಮಾರಾಟಕ್ಕೆ ಅನುಮತಿ ಮಾಡಿಕೊಟ್ಟಾಗಿನಿಂದ ಅಪರಾಧ ಚಟುವಟಿಕೆಗಳು ಸಹ ಹೆಚ್ಚಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net