ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ರೀ-ಎಂಟ್ರಿ! ಹೀಗಿದೆ ಮಾಜಿ ಪ್ರಧಾನಿ ಪುತ್ರ ಕೊಟ್ಟ ಸುಳಿವು

ವಿಜಯವಾಣಿ - 2024-08-09T122816.481
Published on

ನವದೆಹಲಿ: ಕಳೆದ ವಾರ ಬಾಂಗ್ಲಾದೇಶದ ಢಾಕಾದಲ್ಲಿ ಸರ್ಕಾರಿ ಉದ್ಯೋಗ ಮೀಸಲಾತಿ ವಿವಾದ ತೀವ್ರ ಸ್ವರೂಪ ಪಡೆದ ಕಾರಣ ಜನರ ಆಕ್ರೋಶ ಮಿತಿಮೀರಿ ಹೋಗಿತ್ತು. ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆಗೆ ಪಟ್ಟುಹಿಡಿದು ಕೈಗೊಂಡಿದ್ದ ಪ್ರತಿಭಟನೆಯು ಹಿಂಚಾಚಾರಕ್ಕೆ ತಿರುಗಿದ ಪರಿಣಾಮ ಘಟನೆಯಲ್ಲಿ 440ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಬಾಂಗ್ಲಾ ತೊರೆದ ಪ್ರಧಾನಿ ಶೇಖ್​ ಹಸೀನಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ, ದೇಶದಿಂದ ಪಲಾಯನ ಮಾಡಿದರು. ಸದ್ಯದ ಮಟ್ಟಿಗೆ ಭಾರತದ ಗಾಜಿಯಾಬಾದ್​ನಲ್ಲಿ ಆಶ್ರಯ ಪಡೆದಿರುವ ಅವರು, ತಮ್ಮ ಪುತ್ರ ಸಜೀಬ್ ವಾಝೆದ್ ಜಾಯ್ ಜತೆಗಿದ್ದು, ಮುಂದಿನ ನಡೆ ಬಗ್ಗೆ ಚರ್ಚಿಸುತ್ತಿದ್ದಾರೆ.

ದೇಶ ಬಿಟ್ಟು ಹೋದ ಶೇಖ್ ಹಸೀನಾ ತಮ್ಮ ಖುರ್ಚಿಗೆ ರಾಜೀನಾಮೆ ಘೋಷಿಸುತ್ತಿದ್ದಂತೆ ನೊಬೆಲ್ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಸ್ತುತ ಶಾಂತಿಯತ್ತ ಮರಳುತ್ತಿರುವ ಬಾಂಗ್ಲಾಗೆ ಹಸೀನಾ ಹೋಗದೆ ಇರುವುದು ಬಹಳ ಒಳಿತು ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಇದೀಗ ಅಮೆರಿಕಾ ಮೂಲದ ಶೇಖ್​ ಪುತ್ರ, "ಈಗ ನಮ್ಮ ತಾಯಿ ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಬಾಂಗ್ಲಾಗೆ ಹೋಗುವುದು ಸತ್ಯ. ಆದ್ರೆ, ಮಧ್ಯಂತರ ಸರ್ಕಾರ ಏನಾದರೂ ಚುನಾವಣೆ ಘೋಷಣೆ ಮಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ" ಎಂದಿದ್ದಾರೆ.

ಕಳೆದ ವಾರವಷ್ಟೇ “ಇನ್ಯಾವತ್ತು ನಮ್ಮ ತಾಯಿ ಬಾಂಗ್ಲಾಗೆ ಹಿಂತಿರುಗುವುದಿಲ್ಲ. ದೇಶವನ್ನು ಉದ್ಧಾರ ಮಾಡುವ ಎಲ್ಲಾ ಪ್ರಯತ್ನಗಳು ಈಗಾಗಲೇ ಮಾಡಿದ್ದೇವೆ. ಪ್ರತಿಬಾರಿ ದೇಶವನ್ನು ಕಾಪಾಡಿ ನಮಗೂ ಸಾಕಾಗಿದೆ. ಸತತವಾಗಿ ಆ ದೇಶಕ್ಕಾಗಿ ಹೋರಾಡಿದ್ದೇವೆ. ಆದ್ರೆ, ಇನ್ಮುಂದೆ ಅದು ಸಾಧ್ಯವಿಲ್ಲ. ನಮಗೆ ಸಾಕಾಗಿದೆ. ಆ ದೇಶದ ಸಮಸ್ಯೆ ಅಲ್ಲಿನ ಜನಕ್ಕೆ ಬಿಡುತ್ತೇವೆ ಎಂದು ಹೇಳಿದ್ದರು. ಆದರೆ, ಅದ್ಯಾಕೋ ತಮ್ಮ ಹೇಳಿಕೆಗೆ ಜಾಯ್​ ಬದ್ಧರಾದಂತೆ ಕಾಣುತ್ತಿಲ್ಲ ಎಂಬುದು ಇಂದು ಆಡಿರುವ ಮಾತುಗಳಿಂದ ಸ್ಪಷ್ಟವಾಗುತ್ತಿದೆ.

"ನಾವು ರಾಜಕೀಯ ತೊರೆಯುವ ಮಾತಿಲ್ಲ. ಮಧ್ಯಂತರ ಸರ್ಕಾರ ಏನಾದರೂ ಚುನಾವಣೆ ಘೋಷಿಸಿದರೆ, ಆಗ ನಮ್ಮ ಅವಾಮಿ ಲೀಗ್ ಪಾರ್ಟಿ ಅಲ್ಲಿ ನಡೆಯುವ ಚುನಾವಣೆಯಲ್ಲಿ ಭಾಗವಹಿಸುತ್ತದೆ. ನಾವು ಸುಲಭವಾಗಿ ಗೆಲ್ಲಬಹುದು ಎಂಬ ಖಾತ್ರಿ ನನಗಿದೆ" ಎಂದು ಶೇಖ್ ಹಸೀನಾ ಪುತ್ರ ಸಜೀಬ್ ವಾಝೆದ್ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net