ಅರ್ಷದ್​ ಕೂಡ ನನ್ನ ಮಗನೇ: ಒಂದೇ ಒಂದು ಮಾತಿನಿಂದ ಎಲ್ಲರ ಮನಗೆದ್ದ ನೀರಜ್ ತಾಯಿ

ವಿಜಯವಾಣಿ - 2024-08-09T114640.258
Published on

ಪ್ಯಾರಿಸ್​: ನಿನ್ನೆ (ಆ.08) ನಡೆದ ಪ್ಯಾರಿಸ್​ ಒಲಿಂಪಿಕ್ಸ್​ ಪುರುಷರ ಜಾವಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಅರ್ಷದ್​ ನದೀಮ್ 92.97 ಮೀಟರ್‌ ಜಾವಲಿನ್​ ಎಸೆದು ಚಿನ್ನದ ಪದಕ ಗೆಲ್ಲುವುದರ ಜತೆಗೆ ಹೊಸ ದಾಖಲೆಗೆ ಅಣಿಯಾದರು. ಇನ್ನು 89.45 ಮೀ. ಜಾವಲಿನ್​ ಎಸೆತದಿಂದ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಭಾರತೀಯರನ್ನು ಹೆಮ್ಮೆಪಡಿಸುವುದರಲ್ಲಿ ಹಿಂದೆ ಸರಿಯಲಿಲ್ಲ. ಚಿನ್ನದ ಓಟದಲ್ಲಿ ಈ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಅಖಾಡಕ್ಕೆ ಇಳಿದಾಗಲೇ ಇದು ರೋಚಕವಾಗಿರಲಿದೆ ಎಂದು ಕ್ರೀಡಾ ಅಭಿಮಾನಿಗಳು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿದ್ದರು. ಆದ್ರೆ, ಅಂತಿಮವಾಗಿ ಈ ಓಟದಲ್ಲಿ ಚಿನ್ನದ ಪದಕ ಗೆಲ್ಲಲು ನೀರಜ್ ವಿಫಲರಾದರು. ತಮ್ಮ ಮಗ ಚಿನ್ನದ ಪದಕ ಗೆಲ್ಲದೇ ಹೋದರು ಬೇಸರಕ್ಕೊಳಗಾಗದ ಚೋಪ್ರಾ ತಾಯಿ, ನದೀಮ್ ಕೂಡ ನನ್ನ ಮಗನೇ ಎಂದು ಹೇಳಿರುವುದು ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಹಿಂದಿನಿಂದಲೂ ಪಾಕಿಸ್ತಾನ-ಭಾರತದ ನಡುವೆ ದ್ವೇಷ, ವೈರತ್ವವೇ ಕೂಡಿದೆ. ಆದ್ರೆ, ಅದನ್ನೆಲ್ಲಾ ಒಂದು ನಿಮಿಷ ಬದಿಗಿಟ್ಟು ಮಮತೆಯಿಂದ ಮಾತನಾಡಿದ ನೀರಜ್ ಚೋಪ್ರಾ ತಾಯಿ ಸರೋಜಾ ದೇವಿ, "ನನ್ನ ಮಗ ಚಿನ್ನ ಗೆಲ್ಲಲು ಸೋತ ಎಂಬ ಬೇಸರವಿದೆ. ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅತ್ಯುತ್ತಮ ಸವಾಲು ಎಸಗಿದ ಅರ್ಷದ್​ ನದೀಮ್​ ಅವರಿಗೆ ನನ್ನ ಅಭಿನಂದನೆಗಳು. ನದೀಮ್ ಕೂಡ ನನ್ನ ಮಗನೇ" ಎಂದು ಹೇಳಿದರು. ಸರೋಜಾ ಅವರ ಈ ಮಾತುಗಳು ವೈರಲ್ ಆಗುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ನೆಟ್ಟಿಗರು, ತಮ್ಮ ಮಗ ಸೋತರೂ ಸಹ ಬೇಸರಗೊಳ್ಳದೆ ಪ್ರತಿಸ್ಪರ್ಧಿಯಾಗಿದ್ದ ಪಾಕ್​ನ ಅರ್ಷದ್​ಗೆ ನೀವು ಕೊಟ್ಟ ಮೆಚ್ಚುಗೆ ಗೌರವಿಸುವಂತದ್ದು ಎಂದು ಅಭಿಪ್ರಾಯಿಸಿದ್ದಾರೆ

"ನನ್ನ ಮಗ ನೀರಜ್ ಬೆಳ್ಳಿ ಪದಕ ಗೆದ್ದಿರುವುದು ನಮಗೆ ತೃಪ್ತಿ ಇದೆ. ಮಗನ ಪ್ರತಿಸ್ಪರ್ಧಿಯಾಗಿ ಚಿನ್ನ ಗೆದ್ದಿರುವ ಪಾಕಿಸ್ತಾನದ ಅರ್ಷದ್​ ನದೀಮ್ ಕೂಡ ನನ್ನ ಮಗನೇ" ಎಂದು ಸಂತಸದಿಂದ ಹೇಳಿದರು. ನೀರಜ್​ರ ತಾಯಿ ಸರೋಜಾ ದೇವಿ ಅವರ ಹೃದಯಸ್ಪರ್ಶಿ ಮಾತುಗಳಿಗೆ ಇದೀಗ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net