

ನವದೆಹಲಿ: ಇಂದು ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಪೇಮೆಂಟ್ಗಳು (Digital Payments) ಹೆಚ್ಚು ಚಾಲ್ತಿಯಲ್ಲಿವೆ. ಆನ್ಲೈನ್ ಪಾವತಿಗಳು ಇಂದಿನ ಕಾಲಘಟ್ಟಕ್ಕೆ ಹೇಳಿ ಮಾಡಿಸಿದ್ದು, ಜನಸಾಮಾನ್ಯರ ದೈನಂದಿನ ಕೆಲಸಗಳನ್ನು ಮತ್ತಷ್ಟು ಸರಳ ಹಾಗೂ ಸುಲಭವಾಗಿಸಿದೆ. ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ (UPI) ಹೊಚ್ಚ ಹೊಸ ಟೆಕ್ನಾಲಜಿಗಳಿಗೆ ಒಗ್ಗಲು ಸಾರ್ವಜನಿಕರು ಇಂದಿಗೂ ಹಿಂದುಳಿಯುತ್ತಿದ್ದಾರೆ. ಗೂಗಲ್ ಪೇ, ಫೋನ್ ಪೇ ಹೀಗೆ ನಾನಾ ಆನ್ಲೈನ್ ಪೇಮೆಂಟ್ಗಳು ಜನಗಳ ಕೈಬೆರಳಿಗೆ ತಲುಪಿದ್ದರೂ ಸಹ ಅದರ ಸದುಪಯೋಗ ಮಾತ್ರ ಅಷ್ಟಾಗಿ ಬಳಕೆಯಾಗುತ್ತಿಲ್ಲ ಎಂಬುದು ಸದ್ಯ ಬೇಸರದ ಸಂಗತಿ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್ ಪೇ (Google Pay) ಉತ್ಪನ್ನ ನಿರ್ವಹಣೆಯ ನಿರ್ದೇಶಕರಾದ ಶರತ್ ಬುಲುಸು (Sharath Bulusu) ಮಾತನಾಡಿದ್ದು, ಡಿಜಿಟಲ್ ಪಾವತಿ ಕುರಿತು ಒಂದಷ್ಟು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
"ಜಾಗತಿಕವಾಗಿ ಭಾಷೆ, ಸ್ಥಳ ಸೇರಿದಂತೆ ಎಲ್ಲೇ ಮೀರಿ ಗಡಿದಾಟಿರುವ ಯುಪಿಐ ಪೇಮೆಂಟ್ಗಳು ಇಂದು ಅತ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿವೆ. ಡಿಜಿಟಲ್ ಪಾವತಿಗಳು ಏನು ಎಂಬುದೇ ಗೊತ್ತಿಲ್ಲ ಎನ್ನುವ ಇನ್ನೂ ಹಲವಾರು ಪ್ರದೇಶಗಳಿವೆ. ಈ ಸ್ಥಳಗಳನ್ನು ನಾವು ತಲುಪುವುದು ಇನ್ನೂ ಬಾಕಿ ಉಳಿದಿದೆ. ಎಲ್ಲಾ ಆಯಾಮಗಳಲ್ಲಿ ಯುಪಿಐ ಜಾಗತಿಕ ಯಶಸ್ಸನ್ನು ಸಾಧಿಸಿದೆ. ಆದರೆ, ಇನ್ನೂ ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವಿದೆ. ಒಂದೊಳ್ಳೆ ವಿನ್ಯಾಸದ ಮೂಲಕ ಹೆಚ್ಚೆಚ್ಚು ಜನರಿಗೆ ನಾವು ಈ ವ್ಯವಸ್ಥೆಯನ್ನು ತಲುಪಿಸಬೇಕು. ತಲುಪಿಸುವುದು ಮಾತ್ರವಲ್ಲದೇ ಅವರಲ್ಲಿ ಇದರ ಕುರಿತು ಅರಿವು ಮೂಡಿಸಬೇಕು" ಎಂದು ಬುಲುಸು ಹೇಳಿದ್ದಾರೆ.
2016ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಾರಂಭಿಸಿದ ಈ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇಂದು ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. "ಈ ಯುಪಿಐ ಒಂದು ತ್ವರಿತ ಪಾವತಿ ವ್ಯವಸ್ಥೆಯಾಗಿದ್ದು, ಬ್ಯಾಂಕ್ ಟು ಬ್ಯಾಂಕ್ ಮತ್ತು ಗ್ರಾಹಕ-ವ್ಯಾಪಾರಿ ನಡುವಿನ ನೇರ ವಹಿವಾಟು ಆಗಿದೆ. ಪ್ರಸ್ತುತ ಭಾರತ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ದೇಶಗಳಲ್ಲಿ ಯುಪಿಐ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇತರ ಹಲವು ದೇಶಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ" ಎಂದು ಬುಲುಸು ತಿಳಿಸಿದ್ದಾರೆ.
"ಈ ವ್ಯವಸ್ಥೆ ಪ್ರತಿಯೊಬ್ಬರಿಗೂ ತಲುಪಬೇಕು. ಎಲ್ಲರಿಗೂ ಸಮಾನತೆ ಸಿಗಬೇಕು. ದೊಡ್ಡ ಉದ್ಯೋಗ ಮಾಡುವವರಿಗೂ ಈ ಸೌಲಭ್ಯಗಳು ಸುಲಭ ಎನ್ನುವಂತಿಲ್ಲ. ನೀವೊಬ್ಬ ಹಳ್ಳಿಯ ರೈತರೇ ಆಗಿರಿ ಅಥವಾ ದಿಲ್ಲಿ ಸಂಸ್ಥೆಯೊಂದರ ಉದ್ಯೋಗಿಯೇ ಆಗಿರಿ. ಯುಪಿಐ ಸೇವೆಗಳು ಈಗ ಸರಳ ಹಾಗೂ ಸುಲಭ. ಡಿಜಿಟಲ್ ಪೇಮೆಂಟ್ಗಳ ಬಗ್ಗೆ ಇಂದಿನ ಯುವಜನತೆ, ಆಯಾ ಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸವುದು ಒಳಿತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).