

ಮುಂಬೈ: ಫಿಫಾ ವರ್ಲ್ಡ್ ಕಪ್ಗೆ ಇನ್ನು ಹೆಚ್ಚು ದಿನ ಉಳಿದಿಲ್ಲ. ಇದೇ ಭಾನುವಾರ, ಅರ್ಜೆಂಟಿನಾ ಮತ್ತು ಫ್ರಾನ್ಸ್ಗಳ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಇವೆರಡರ ಪೈಕಿ ಯಾವ ದೇಶ ಗೆಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ, ಫೈನಲ್ಸ್ ಪಂದ್ಯದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ಖತಾರ್ನಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್ ಕಪ್ನ ಫೈನಲ್ ಪಂದ್ಯದಲ್ಲಿ ಶಾರೂಖ್ ಖಾನ್ ಭಾಗವಹಿಸಲಿದ್ದಾರೆ. ಕ್ರಿಕೆಟ್ ಅಭಿಮಾನಿಯಾಗಿರುವ ಶಾರೂಖ್ಗೆ ಫುಟ್ಬಾಲ್ ಬಗ್ಗೆ ಯಾವಾಗ ಅಷ್ಟೊಂದು ಪ್ರೀತಿ ಬೆಳೆಯಿತು ಎಂಬ ಪ್ರಶ್ನೆ ಸಹಜ. ನಿಜ ಹೇಳಬೇಕೆಂದರೆ, ಈ ಫೈನಲ್ಸ್ನಲ್ಲಿ ಶಾರೂಖ್ ಭಾಗವಹಿಸುತ್ತಿರುವುದು ಸಂಪೂರ್ಣ ಫೂಟ್ಬಾಲ್ ಪ್ರೀತಿಯಿಂದಲ್ಲ. ಈ ವೇದಿಕೆಯನ್ನು ಶಾರೂಖ್ ತಮ್ಮ 'ಪಠಾಣ್' ಚಿತ್ರವನ್ನು ಪ್ರಮೋಟ್ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ.
ಶಾರೂಖ್ ಖಾನ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರವೊಂದು ಬಿಡುಗಡೆಯಾಗಿ ನಾಲ್ಕು ವರ್ಷಗಳೇ ಆಗಿವೆ. ಈ ಮಧ್ಯೆ, ಅವರು 'ಬ್ರಹ್ಮಾಸ್ತ್ರ', 'ರಾಕೆಟ್ರಿ' ಮತ್ತು 'ಲಾಲ್ ಸಿಂಗ್ ಛಡ್ಡಾ' ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಅವೆಲ್ಲ ಅತಿಥಿ ಪಾತ್ರಗಳು. ಇನ್ನು, 'ಪಠಾಣ್' ಚಿತ್ರದಲ್ಲಿ ಶಾರೂಖ್ ಮೊದಲ ಬಾರಿಗೆ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದು, ಈ ಚಿತ್ರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವುದಕ್ಕೆ ಸಜ್ಜಾಗಿದ್ದಾರೆ. ಇದಕ್ಕೆ ಫಿಫಾಗಿಂತ ಇನ್ನೊಂದು ದೊಡ್ಡ ಅಂತಾರಾಷ್ಟ್ರೀಯ ವೇದಿಕೆ ಸಿಗುವುದು ಕಷ್ಟ ಎಂದು ಕಿಂಗ್ ಖಾನ್ಗೆ ಅರ್ಥವಾಗಿದೆ.
ಫಿಫಾ ಒಂದು ಜಾಗತಿಕ ವೇದಿಕೆಯಾಗಿದ್ದು, ಇಲ್ಲಿ ಚಿತ್ರವನ್ನು ಪ್ರಮೋಷನ್ ಮಾಡಿದರೆ, ಜಗತ್ತಿನಾದ್ಯಂತ ಜನರನ್ನು ತಲುಪಬಹುದು ಎಂಬ ವಿಷಯ ಶಾರೂಖ್ಗೆ ಗೊತ್ತಿಲ್ಲದೇನಲ್ಲ. ಅದೇ ಕಾರಣಕ್ಕೆ, ಅವರು ತಮ್ಮ ತಂಡದೊಂದಿಗೆ ಭಾನುವಾರ ಕತಾರ್ಗೆ ಹೋಗಿ ಅಲ್ಲಿ ಫಿಫಾದಲ್ಲಿ ಭಾಗವಹಿಸಿ, ತಮ್ಮ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಶಾರೂಖ್ ಖಾನ್ ಆಗಲೀ, ಅವರ ತಂಡದವರಾಗಲೀ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಆದರೆ, ಶಾರೂಖ್ ಖಾನ್ ಯೂನಿವರ್ಸ್ ಫ್ಯಾನ್ ಕ್ಲಬ್ ಎಂಬ ಅಭಿಮಾನಿ ಸಂಘವು ಇಂಥದ್ದೊಂದು ಪೋಸ್ಟ್ ಹಾಕಿದೆ.