

ಬೆಂಗಳೂರು: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಡಿಎಲ್, ಎಲ್ಎಲ್, ಫಿಟ್ನೆಸ್ ಸರ್ಟಿಫಿಕೆಟ್ ಮಾಡಿಸುವ ಕೆಲಸಗಳು ಆರ್ಟಿಒ ಕಚೇರಿಗಳಲ್ಲಿ ಮತ್ತೆ ಶುರುವಾಗಿದೆಯಾದರೂ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಒಂದು ದಿನ ಸರ್ವರ್ ಡೌನ್ ಆಗಿದ್ದರೆ ಮತ್ತೊಂದು ದಿನ ನೆಟ್ವರ್ಕ್ ಸಮಸ್ಯೆ. ಇದನ್ನು ಬಗೆಹರಿಸಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಉತ್ತಮ ಸೇವೆ ಒದಗಿಸಬೇಕಾದ ಎನ್ಐಸಿ ಹಾಗೂ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಪ್ರತಿ ಆರ್ಟಿಒನಲ್ಲಿ ಸರಾಸರಿ ಶೇ.50 ಹುದ್ದೆ ಖಾಲಿ ಇವೆ. ಸಾರಥಿ-4 ತಂತ್ರಾಂಶ ಅಳವಡಿಸಲಾಗಿದ್ದರೂ ಹಳೆಯ ಕಂಪ್ಯೂಟರ್, ಯುಪಿಎಸ್ ತಂತ್ರಜ್ಞಾನದ ವೇಗಕ್ಕೆ ಒಗ್ಗುತ್ತಿಲ್ಲ. ಇನ್ನೂ ಕೆಲವೆಡೆ ರಿಪೇರಿಗೆ ಬಂದಿವೆ. ಸಾಫ್ಟ್ವೇರ್ ಅಪ್ಡೇಟ್ ಆಗದ ಕಾರಣ ಕೆಲಸ ನಿರ್ವಹಿಸಲು ಕಷ್ಟವಾಗಿದೆ. 2008ರಿಂದಲೂ ಆರ್ಟಿಒ ಕಚೇರಿಗಳಲ್ಲಿ ಸಮಸ್ಯೆ ಇದೆ. ಒಬ್ಬರ ದಾಖಲಾತಿ ಅಪ್ಲೋಡ್ಗೆ ಗಂಟೆಗಟ್ಟಲೆ ಕಾಯಬೇಕು. ತಂತ್ರಾಂಶ ಬಳಕೆ ಬಗ್ಗೆ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸದಿರುವುದೂ ಕೂಡ ಕೆಲಸ ವಿಳಂಬಕ್ಕೆ ಕಾರಣ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಸೋಮವಾರ ಬೆಂಗಳೂರಿನ ಕೆಲ ಆರ್ಟಿಒಗಳಲ್ಲಿ ಸಂಜೆ 4 ಗಂಟೆಯವರೆಗೂ ನೆಟ್ವರ್ಕ್ ಇರಲಿಲ್ಲ. ಬಳಿಕ ಬಂತಾದರೂ ಬೆರಳೆಣಿಕೆ ಜನರಿಗಷ್ಟೇ ಸೇವೆ ನೀಡಲು ಸಾಧ್ಯವಾಗಿದೆ. ಮಂಗಳವಾರವೂ ಕೆಲ ಕಚೇರಿಗಳಲ್ಲಿ ಸರ್ವರ್ ಡೌನ್ ಆಗಿ ಜನ ಸಂಕಷ್ಟ ಎದುರಿಸಬೇಕಾಯಿತು.
ಅಧಿಕಾರಿಗಳು ಹೈರಾಣ: ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆ ಆಯುಕ್ತರ ಕೇಂದ್ರ ಕಚೇರಿಯಲ್ಲಿ ಮುಖ್ಯ ಸರ್ವರ್ ಅಳವಡಿಸಲಾಗಿದೆ. ಅಲ್ಲಿಂದಲೇ ಆರ್ಟಿಒ ಕಚೇರಿಗಳ ನಿಯಂತ್ರಣ ಮಾಡಲಾಗುತ್ತದೆ. ಆದರೆ, ನೆಟ್ವರ್ಕ್ ಯಾವಾಗ ಬರುತ್ತೆ, ಯಾವಾಗ ಹೋಗುತ್ತೆ ಎನ್ನುವುದೇ ಗೊತ್ತಾಗುವುದಿಲ್ಲ. ಸ್ಲಾಟ್ ತೆಗೆದುಕೊಂಡ ದಿನ ಕೆಲಸ ಆಗಲಿಲ್ಲ ಎಂದರೆ ಮುಂದಿನ ದಿನಕ್ಕೆ ನಿಗದಿಗೊಳಿಸಲು ಆಗುವುದಿಲ್ಲ. ನಾಳೆಗೆ ಮತ್ತೊಬ್ಬರು ಸಮಯ ನಿಗದಿ ಪಡೆದಿರುತ್ತಾರೆ. ಹೀಗಾಗಿ ಮತ್ತೆ ಹೊಸದಾಗಿ ಸಮಯ ಕಾಯ್ದಿರಿಸಬೇಕಾಗುತ್ತದೆ. ಈ ವಿಚಾರ ತಿಳಿಯದ ಜನ ಜಗಳಕ್ಕಿಳಿಯುತ್ತಾರೆಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
ಪ್ರತಿನಿತ್ಯ 500 ಜನ ಭೇಟಿ: ಎಲ್ಎಲ್, ಡಿಎಲ್, ಎಫ್ಸಿ, ದಾಖಲೆ ನವೀಕರಣ, ಆರ್ಸಿ ವರ್ಗಾವಣೆ, ಹೊಸ ವಾಹನಗಳ ನೋಂದಣಿ ಹೀಗೆ ಬೇರೆಬೇರೆ ಸೇವೆಗಳಿಗಾಗಿ ಪ್ರತಿ ಆರ್ಟಿಒಗಳಿಗೆ ನಿತ್ಯ 450 ರಿಂದ 500 ಜನ ಭೇಟಿ ನೀಡುತ್ತಾರೆ.
ಕಮಿಷನರ್ ಕಚೇರಿಗೆ ಮೇಲ್: ಸರ್ವರ್, ನೆಟ್ವರ್ಕ್ ಸಮಸ್ಯೆ ಜತೆಗೆ ಡೇಟಾ ಎಂಟ್ರಿಯಲ್ಲಾಗುವ ತಪ್ಪು ತಿದ್ದುವ ಕಾಯಕದಲ್ಲೇ ಅಧಿಕಾರಿಗಳು ಹೈರಾಣಾಗುತ್ತಾರೆ. ಚಾಸ್ಸಿ ನಂಬರ್ ಬದಲಾವಣೆ ಅಥವಾ ತಪ್ಪಾದ ಹೆಸರು ನಮೂದಾಗಿದ್ದರೆ ಅದನ್ನು ಸರಿಪಡಿಸಲು ಸಾರಿಗೆ ಇಲಾಖೆ ಕೇಂದ್ರ ಕಚೇರಿಗೆ ಇ ಮೇಲ್ ಕಳುಹಿಸಬೇಕು. ತಪ್ಪು ಸರಿಪಡಿಸುವ ಅಧಿಕಾರ ಆರ್ಟಿಒಗಳಿಗಿದ್ದರೂ ಚಲಾಯಿಸಲು ಬಿಡುತ್ತಿಲ್ಲ ಎಂಬುದು ಬಹುತೇಕ ಅಧಿಕಾರಿಗಳ ಅಭಿಪ್ರಾಯ.