

ನವದೆಹಲಿ: ಗಾಡಿ ಅಲ್ಟರೇಷನ್ ಮಾಡಿಕೊಳ್ಳುವುದನ್ನು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ಬಾಡಿಯನ್ನು ಅಲ್ಟರೇಷನ್ ಮಾಡಿಕೊಂಡಿದ್ದಾನೆ. ಅದನ್ನೇ ಹವ್ಯಾಸ ಮಾಡಿಕೊಂಡಿರುವ ಈತ ಎರಡು ಬೆರಳುಗಳನ್ನು ಕತ್ತರಿಸಿಕೊಂಡಿದ್ದಲ್ಲದೆ, ಬಾಯಿಗೆರಡು ಕೋರೆ ಸಿಕ್ಕಿಸಿಕೊಂಡು ಗಮನ ಸೆಳೆದಿದ್ದಾನೆ.
ಮೈಖೇಲ್ ಫರೊ ಡೊ ಪ್ರಾಡೋ ಎಂಬ ಬ್ರೆಜಿಲಿನ ಈ 44 ವರ್ಷದ ವ್ಯಕ್ತಿ ದೇಹವನ್ನು ಚಿತ್ರವಿಚಿತ್ರವಾಗಿ ಮಾರ್ಪಡಿಸಿಕೊಂಡಿದ್ದಲ್ಲದೆ, ತರಹೇವಾರಿ ಪಿಯರ್ಸಿಂಗ್ ಹಾಗೂ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾನೆ. ಕಳೆದ ವರ್ಷ ಇಂಥದ್ದೇ ವಿಷಯದಲ್ಲಿ ಸ್ಪರ್ಧೆಗೆ ಬಿದ್ದು ಮೂಗನ್ನು ಕತ್ತರಿಸಿಕೊಂಡಿದ್ದ ಈತ ಈ ಸಲ ಬೆರಳು ಕತ್ತರಿಸಿ, ಕೋರೆಗಳನ್ನು ಸಿಕ್ಕಿಸಿಕೊಂಡಿದ್ದಾನೆ. ಈ ಥರ ವಿಚಿತ್ರ ವಿಧಾನಕ್ಕೆ ಒಳಗಾಗಿರುವವರ ಪೈಕಿ ನನ್ನ ಪತಿ ಜಗತ್ತಿನಲ್ಲೇ ಮೂರನೇ ವ್ಯಕ್ತಿ ಎಂದು ಈತನ ಪತ್ನಿ ಹೇಳಿಕೊಂಡಿದ್ದಾಳೆ.
ಈ ಸಲ ಮೈಖೇಲ್ ತನ್ನ ಎಡಗೈನಲ್ಲಿನ ಉಂಗುರ ಬೆರಳು ಹಾಗೂ ಬಲಗೈನಲ್ಲಿನ ಮಧ್ಯ ಬೆರಳನ್ನು ಕತ್ತರಿಸಿಕೊಂಡಿದ್ದಲ್ಲದೆ, ಬೆಳ್ಳಿಯ ಎರಡು ಕೋರೆಹಲ್ಲುಗಳನ್ನು ದವಡೆಗೆ ಅಳವಡಿಸಿಕೊಂಡಿದ್ದಾನೆ. ಈತ 25 ವರ್ಷಗಳಿಂದ ಟ್ಯಾಟೂ ಆರ್ಟಿಸ್ಟ್ ಆಗಿದ್ದು, ಈತನ ಪತ್ನಿ ಬಾಡಿ ಮಾಡಿಫಿಕೇಷನ್ನಲ್ಲಿ ಪರಿಣತಿ ಹೊಂದಿದ್ದು, ಬಹಳಷ್ಟು ಬದಲಾವಣೆ ಹಿಂದಿನ ರೂವಾರಿ ಆಕೆಯೇ ಎನ್ನಲಾಗಿದೆ. (ಏಜೆನ್ಸೀಸ್)