ಪದ್ಮಶ್ರೀ ಪುರಸ್ಕೃತ ಪತ್ರಕರ್ತ ವಿನೋದ್ ದುವಾ ಇನ್ನಿಲ್ಲ...

Vinod Dua
Published on

ನವದೆಹಲಿ: ಹಿರಿಯ ಪತ್ರಕರ್ತ, ಪದ್ಮಶ್ರೀ ಪುರಸ್ಕೃತ ವಿನೋದ್ ದುವಾ ಇಂದು ದೀರ್ಘಕಾಲೀನ ಅನಾರೋಗ್ಯದಿಂದಾಗಿ ಮೃತಪಟ್ಟರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ನಾಳೆ ದೆಹಲಿಯ ಲೋಧಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆದಲಿದೆ.

ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ ಅವರು ಬಳಿಕ ಇತರ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ವಾರ ದೆಹಲಿಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತೀವ್ರ ನಿಗಾ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಸಾವಿಗೀಡಾದ ವಿಷಯವನ್ನು ಅವರ ಪುತ್ರಿ, ನಟಿ ಮಲ್ಲಿಕಾ ದುವಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ದೂರದರ್ಶನ ಸೇರಿ ಹಲವು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಇವರು ಸುಮಾರು 42 ವರ್ಷಗಳ ಕಾಲ ಸಕ್ರಿಯ ಪತ್ರಕರ್ತರಾಗಿದ್ದರು. ಎರಡನೇ ಅಲೆಯಲ್ಲಿ ವಿನೋದ್ ದುವಾ ಹಾಗೂ ಅವರ ಪತ್ನಿ ಪದ್ಮಾವತಿ ದುವಾ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆದರೆ ಪತ್ನಿ ಜೂನ್​ ತಿಂಗಳಲ್ಲಿ ನಿಧನರಾಗಿದ್ದು, ಆ ಬಳಿಕ ವಿನೋದ್ ತೀವ್ರ ನೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net