ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ...

Rafeeq
Published on

ಚಾಮರಾಜನಗರ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದವ ಕಾರಾಗೃಹದಿಂದ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ತಪ್ಪಿಸಿಕೊಂಡು ಪರಾರಿಯಾಗಿದ್ದು, ಕೊನೆಗೂ ಮೂರು ವರ್ಷಗಳ ಬಳಿಕ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚಾಮರಾಜನಗರ ಗಾಳಿಪುರ ಬಡಾವಣೆಯ ರಫೀಕ್​ ಎಂಬಾತ ಸಿಕ್ಕಿಬಿದ್ದ ಅಪರಾಧಿ. ಈತ ಮೂರು ವರ್ಷಗಳ ಹಿಂದೆ ಪೊಲೀಸರು ಕಾರಾಗೃಹದಿಂದ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ತಪ್ಪಿಸಿಕೊಂಡು ಪರಾರಿಯಾಗಿದ್ದ. ಪೊಲೀಸರಿಗೆ ತನ್ನ ಜಾಡು ಸಿಗಬಾರದು ಎಮಬ ಕಾರಣಕ್ಕೆ ಈತ ಮೂರು ವರ್ಷ ಯಾವುದೇ ಫೋನ್​ ಬಳಸಿರಲಿಲ್ಲ. ಹೀಗಾಗಿ ಪೊಲೀಸರು ಈತನ ಪತ್ತೆಗೆ ಪ್ರಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ.

ಈತನ ವಿರುದ್ಧ ಮೈಸೂರು, ಚಾಮರಾಜನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇವನು ಮನೆ ಕಳ್ಳತನ, ರಾಬರಿ ಮುಂತಾದ ಅಪರಾಧಗಳಲ್ಲಿ ಭಾಗಿಯಾಗಿದ್ದ.

ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಈತ ಬಳ್ಳಾರಿಯಲ್ಲಿ ಬೀದಿ ಬದಿಯಲ್ಲಿ ಪರೋಟ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಚಾಮರಾಜನಗರ ಪೊಲೀಸರು ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ. ರಫೀಕ್ ಬಂಧನಕ್ಕಾಗಿ ಚಾಮರಾಜನಗರ ಎಸ್​ಪಿ ದಿವ್ಯಾ ಸಾರಾ ಥಾಮಸ್​ ವಿಶೇಷ ತಂಡ ರಚಿಸಿದ್ದು, ಈ ತಂಡ ಒಂದು ತಿಂಗಳ ಸತತ ಪ್ರಯತ್ನದ ಬಳಿಕ ಈತನನ್ನು ಪತ್ತೆ ಹಚ್ಚಿ ಬಂಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net