ಕನಕಪುರ ರಸ್ತೆ ಸಮೀಪ ಎರಡನೇ ಏರ್​ಪೋರ್ಟ್? ಕೇಂದ್ರ ಸರ್ಕಾರಕ್ಕೆ ಮೂರು ಸ್ಥಳಗಳ ಪ್ರಸ್ತಾವನೆ ಸಲ್ಲಿಕೆ

Airport
Published on

ನವದೆಹಲಿ: ಬಹು ನಿರೀಕ್ಷಿತ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ ಅಂತಿಮಗೊಳಿಸಿರುವ ರಾಜ್ಯ ಸರ್ಕಾರ, ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಗುರುವಾರ ಪ್ರಸ್ತಾವನೆ ಸಲ್ಲಿಸಿದೆ. ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಿುಸುವ ಪ್ರಯತ್ನ ನಡೆಸಿರುವ ನಡುವೆಯೇ ಬೆಂಗಳೂರಿನ ಎಲ್ಲ ಭಾಗಗಳಿಗೆ ವಿಶೇಷವಾಗಿ ಐಟಿ -ಬಿಟಿ ಕಂಪನಿಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಿುಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ತೀವ್ರಗೊಳಿಸಿದೆ. ಎರಡನೇ ವಿಮಾನ ನಿಲ್ದಾಣ ಸ್ಥಳ ನಿಗದಿ ವಿಚಾರದಲ್ಲಿ ಸರ್ಕಾರ ಗೊಂದಲಕ್ಕೆ ಸಿಲುಕಿತ್ತು.

ಹೊಸ ವಿಮಾನ ನಿಲ್ದಾಣ ತುಮಕೂರಿನಲ್ಲಿ ಆಗಬೇಕೆಂಬುದು ಗೃಹ ಸಚಿವ ಡಾ. ಪರಮೇಶ್ವರ್ ಒತ್ತಾಸೆ ಆಗಿತ್ತು. ಆದರೆ ಬಿಡದಿ ಹಾಗೂ ಹಾರೋಹಳ್ಳಿ ಭಾಗದಲ್ಲಿ ಆಗಬೇಕೆಂದು ಸಚಿವರು ಹಾಗೂ ಪ್ರಭಾವಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ಅಂತಿಮವಾಗಿ 3 ಸ್ಥಳ ಗುರುತು ಮಾಡಿರುವ ರಾಜ್ಯ ಸರ್ಕಾರ, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಿಕೊಟ್ಟಿದೆ.

ಕನಕಪುರ ರಸ್ತೆಯಲ್ಲೇ ಎರಡು ಸ್ಥಳ ಏಕೆ?: ಬೆಂಗಳೂರಿನ ಪ್ರಯಾಣಿಕರನ್ನು ಸೆಳೆಯುವ ಹಾಗೂ ತಮಿಳುನಾಡಿಗೂ ಅನುಕೂಲವಾಗುವಂತೆ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣಕ್ಕೆ ತಮಿಳುನಾಡು ಸರ್ಕಾರ ಸಿದ್ಧತೆ ನಡೆಸಿತ್ತು. ಒಂದು ವೇಳೆ ಹೊಸೂರಿನಲ್ಲಿ ನೂತನ ವಿಮಾನ ನಿಲ್ದಾಣವಾದರೆ, ಬೆಂಗಳೂರಿನ ದಕ್ಷಿಣ ಹಾಗೂ ಇಲೆಕ್ಟ್ರಾನಿಕ್ ಸಿಟಿ ಸುತ್ತ ಮುತ್ತ ಸೇರಿದಂತೆ ಇನ್ನಿತರ ಭಾಗದ ಪ್ರಯಾಣಿಕರು ಅಲ್ಲಿಗೆ ತೆರಳುವ ಸ್ಥಿತಿ ಉಂಟಾಗುತ್ತಿತ್ತು. ವಿಶೇಷವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಲ್ಲಿ ಬೆಂಗಳೂರು ದಕ್ಷಿಣ ಭಾಗದಿಂದ ಬರುವವರೇ ಹೆಚ್ಚು. ಈ ನಿಟ್ಟಿನಲ್ಲಿ ಈಗಿರುವ ಏರ್​ಪೋರ್ಟ್​ಗೆ ತೊಂದರೆ ಆಗದಂತೆ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಕನಕಪುರ ರಸ್ತೆಯಲ್ಲೇ ಎರಡು ಸ್ಥಳಗಳನ್ನ ನಿಗದಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ರಾಜ್ಯ ಸರ್ಕಾರ ನಿಗದಿಪಡಿಸಿರುವ ಈ ಎರಡು ಜಾಗ ನೈಸ್ ರಸ್ತೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದ್ದು, ಸಮೀಪದ ಮೆಟ್ರೋ ನಿಲ್ದಾಣ ಸಹ 5 ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ಈ ಮೂಲಕ ತುಮಕೂರು ಭಾಗದಿಂದ ಬರುವ ಪ್ರಯಾಣಿಕರು ಹಾಗೂ ಬೆಂಗಳೂರು ಸೇರಿದಂತೆ ಮೈಸೂರು ಕಡೆಯಿಂದ ಬರುವ ಪ್ರಯಾಣಿಕರಿಗೂ ಸಹ ಅನುಕೂಲವಾಗುವಂತೆ ಸ್ಥಳ ನಿಗದಿಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮುಂದಿನ ಪ್ರಕ್ರಿಯೆಗಳೇನು?: ಸದ್ಯ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಅವಲೋಕಿಸಲಿದೆ. ರಾಜ್ಯ ನಿಗದಿಪಡಿಸಿರುವ 3 ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಒಂದನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. ಈ ಬಳಿಕ ವಿಮಾನ ನಿಲ್ದಾಣ ನಿರ್ವಣದ ಕಾರ್ಯ ಸಾಧ್ಯತೆಗಳ ಮೌಲ್ಯಮಾಪನವನ್ನು ರಾಜ್ಯ ಸರ್ಕಾರ ಪುನಃ ಮಾಡಲಿದೆ. ಸಂಪೂರ್ಣ ಅಧ್ಯಯನದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.

3 ಸ್ಥಳಗಳು ಯಾವುವು?: 3 ಸ್ಥಳಗಳ ಪೈಕಿ ಎರಡು ಕನಕಪುರ ರಸ್ತೆಯಲ್ಲಿದ್ದರೆ ಇನ್ನೊಂದು ಬೆಂಗಳೂರು ವಾಯವ್ಯ ಭಾಗದಲ್ಲಿ ಗುರುತಿಸಲ್ಪಡುವ ನೆಲಮಂಗಲ ಹಾಗೂ ಕುಣಿಗಲ್ ರಸ್ತೆ ಮಧ್ಯ ಭಾಗದಲ್ಲಿದೆ. ಕನಕಪುರ ರಸ್ತೆಯಲ್ಲಿ ನಿಗದಿಯಾಗಿರುವ ಪ್ರಸ್ತಾವಿತ ಮೊದಲ ಸ್ಥಳ 4800 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಬೆಂಗಳೂರಿನ ನೈರುತ್ಯ ಭಾಗದಲ್ಲಿದೆ. ಎರಡನೇ ಸ್ಥಳ ಕನಕಪುರ ರಸ್ತೆಯಲ್ಲಿ 5000 ಎಕರೆ ಜಾಗವನ್ನು ಹೊಂದಿದೆ. ನೆಲಮಂಗಲ ಹಾಗೂ ಕುಣಿಗಲ್ ರಸ್ತೆ ಬಳಿಯ ಸ್ಥಳ 5200 ಎಕರೆ ಪ್ರದೇಶ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net