ರಾಜ್ಯದ ನೇಕಾರರ ಉತ್ಪನ್ನವೇ ಶಾಲಾ ಸಮವಸ್ತ್ರಕ್ಕೆ ಬಳಕೆ!

school
Published on

ಬೆಂಗಳೂರು: ಶಾಲಾ ಮಕ್ಕಳಿಗೆ ಸರ್ಕಾರ ಉಚಿತವಾಗಿ ನೀಡುವ ಸಮವಸ್ತ್ರಕ್ಕೆ ಅಗತ್ಯ ಬಟ್ಟೆಯನ್ನು ರಾಜ್ಯದ ನೇಕಾರರಿಂದಲೇ ಖರೀದಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ಕೈಮಗ್ಗ, ಜವಳಿ ಸಚಿವ ಶ್ರೀಮಂತ ಬಾಳಾ ಸಾಹೇಬ ಪಾಟೀಲ್ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ಪ್ರಶ್ನೋತ್ತರ ಅವಧಿ ಹಾಗೂ ಬಜೆಟ್ ಮೇಲಿನ ಚರ್ಚೆಯ ವೇಳೆ ಎರಡು ಸಂದರ್ಭದಲ್ಲಿ ಶಾಸಕರಿಂದ ಬಂದ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಅಧಿಕಾರಿಗಳು ನೆರೆಯ ತಮಿಳುನಾಡಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅಲ್ಲಿ ತುಂಬ ಚೆನ್ನಾಗಿ ನಿರ್ವಹಣೆಯಾಗುತ್ತಿದೆ. ಅದೇ ರೀತಿ ಅನುಷ್ಠಾನ ಮಾಡುವ ಸಂಬಂಧ ಸಿಎಂ ಗಮನಕ್ಕೆ ತಂದಿದ್ದು, ಬಜೆಟ್ ಅಧಿವೇಶನ ಮುಗಿದ ಬಳಿಕ ಚರ್ಚೆಗೆ ಕರೆದಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿರಿ ಮುತ್ತು ಕೊಟ್ಟರೆ ತುಟಿ‌ ಸುಡುತ್ತೆ ಎಂದ ಬಿಜೆಪಿ ಶಾಸಕ!

ಇದೊಂದು ತೀರ್ಮಾನವಾಯಿತೆಂದರೆ ನಮ್ಮ ಇಲಾಖೆಯ ಅಧೀನದಲ್ಲಿ ಬರುವ ಮೂರು ನಿಗಮಗಳು ಸರಿಪಡಿಸಬಹುದು. ಹಾಗೆಯೇ ಆಶಾ- ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲು ನೇಕಾರರಿಂದ 6 ಲಕ್ಷ ಸೀರೆ ಖರೀದಿ ಸಂಬಂಧ ಎರಡು ಬಾರಿ ಹಣಕಾಸು ಇಲಾಖೆ ನಮ್ಮ ಪ್ರಸ್ತಾವನೆ ತಿರಿಸ್ಕರಿಸಿದೆ. ಇನ್ನೊಮ್ಮೆ ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿಗೆ ವಿನಂತಿ ಮಾಡುವೆ ಎಂದು ಶ್ರೀಮಂತ ಬಾಳಾ ಸಾಹೇಬ ಪಾಟೀಲ್ ಭರವಸೆ ನೀಡಿದರು.

ಹಾಗೆಯೇ ನೇಕಾರರಿಗೆ ನೀಡುವ ಸಿಸಿ ಸಾಲ ಮನ್ನಾ ಕುರಿತು ಪಟ್ಟಿ ಮಾಡಿದ್ದು, ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳಿಸಿದ್ದು ಒಪ್ಪಿದ್ದಾರೆ. ಶೀಘ್ರವೇ ಈ ಬಗ್ಗೆ ಮಾಹಿತಿ ಪ್ರಕಟಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net