

ಬೆಳಗಾವಿ: ರಾಜ್ಯಾದ್ಯಂತ ಭಾರಿ ಮಳೆಗೆ ಹಲವೆಡೆ ಅವಾಂತರಗಳು ನಡೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಶಾಲೆಯೊಂದರ ಕೊಠಡಿಗಳೇ ಕುಸಿದು ಬಿದ್ದಿವೆ. ಬೆಳಗಾವಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಶಾಲೆ ಭಾರಿ ಮಳೆಯಿಂದಾಗಿ ಹಾನಿಗೀಡಾಗಿದೆ. ಶಾಲೆಯ ಮೂರು ಕೊಠಡಿಗಳು ಇಂದು ಕುಸಿತಕ್ಕೊಳಗಾಗಿವೆ. ಬೆಳಗ್ಗೆ 8.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಮಕ್ಕಳು ಶಾಲೆಗೆ ಬರುವ ಮುನ್ನವೇ ಕೊಠಡಿಗಳು ಕುಸಿದ ಪರಿಣಾಮ ಸಂಭಾವ್ಯ ಭಾರಿ ದುರಂತ ತಪ್ಪಿಹೋಗಿದೆ. ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಮನೆಗೆ ಕಳಿಸಿದ್ದಾರೆ. ಸ್ಥಳಕ್ಕೆ ಖಾನಾಪುರ ತಹಶೀಲ್ದಾರ್, ಬಿಇಒ ಸೇರಿದಂತೆ ತಾಲೂಕಿನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.