ವೇದಾಂತ ಶಾಸ್ತ್ರ ಸಾಗರವಿದ್ದಂತೆ…

.jpg
Published on

ವಿದ್ವಾನ್ ಡಾ. ಕೆ.ಜಿ. ಸುಬ್ರಾಯ ಶರ್ಮಾ ಅಮೃತೋತ್ಸವ,

98,500 ಪ್ರವಚನಗಳು, 145 ವೇದಾಂತ ಗ್ರಂಥಗಳ ರಚನೆ, 74 ಪ್ರಶಸ್ತಿ-ಸನ್ಮಾನಗಳು, 2 ಗೌರವ ಡಾಕ್ಟರೇಟ್​ಗಳು... ವಿದ್ವಾನ್ ಡಾ. ಕೆ.ಜಿ. ಸುಬ್ರಾಯ ಶರ್ಮಾ ಅವರ ಸಾಧನೆಯ ಪಟ್ಟಿ ಹೀಗೆಯೇ ಮುಂದುವರಿಯುತ್ತದೆ. ಕಳೆದ 57 ವರ್ಷಗಳಿಂದ ವೇದಾಂತ, ಪುರಾಣ ಮತ್ತು ಇತರ ವಿಷಯಗಳ ಕುರಿತು ಹೇಳುತ್ತಾ, ಬರೆಯುತ್ತಾ ಬಂದಿರುವ ಸುಬ್ರಾಯ ಶರ್ಮಾ ಈಗ 75ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಚೇತನ್ ನಾಡಿಗೇರ್

ವೇದಾಂತ ಎನ್ನುವುದು ಕಬ್ಬಿಣದ ಕಡಲೆ ಎನ್ನುವ ನಂಬಿಕೆ ಜನಸಾಮಾನ್ಯರಲ್ಲಿದೆ. ಆದರೆ, ಅದು ಕ್ಲಿಷ್ಟವಲ್ಲ, ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಶಾಂತಿ, ನೆಮ್ಮದಿ ಎಲ್ಲವೂ ಸಿಗುತ್ತದೆ ಎಂದು ಹಲವು ದಶಕಗಳಿಂದ ಪ್ರತಿಪಾದಿಸುತ್ತಾ ಬಂದವರು ಡಾ. ಸುಬ್ರಾಯ ಶರ್ವ. ತಮ್ಮ ಉಪನ್ಯಾಸಗಳಲ್ಲಿ, ಗ್ರಂಥಗಳಲ್ಲಿ ಅವರು ಅದನ್ನೇ ಹೇಳುತ್ತಾ ಬಂದಿದ್ದಾರೆ. ಈ ಮೂಲಕ ಸಾವಿರಾರು ಜನರಲ್ಲಿ ವೇದಾಂತ ಶಾಸ್ತ್ರದ ಬಗ್ಗೆ ಒಲವು ಮೂಡಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ಕಿಕ್ಕೇರಿಯವರಾದ ಸುಬ್ರಾಯ ಶರ್ಮಾ ಹುಟ್ಟಿದ್ದು 1947ರ ಡಿಸೆಂಬರ್ 20ರಂದು. 11ನೇ ವರ್ಷಕ್ಕೇ ಗುರುಕುಲ ಸೇರಿದ ಅವರು, ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳಿಂದ ವೇದಾಂತ, ಸಂಸ್ಕೃತ ಮತ್ತು ಇಂಗ್ಲಿಷ್ ಕಲಿತರು. 1965ರಿಂದಲೇ ವೇದಾಂತ ಪ್ರವಚನಗಳನ್ನು ಪ್ರಾರಂಭಿಸಿದರು. 1967ರಿಂದ ಗುರುಗಳಿಗೆ ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1970ರಲ್ಲಿ ಬೆಂಗಳೂರು ಶಾಖಾ ಕಾರ್ಯಾಲಯಕ್ಕೆ ಬಂದು, ಆಶ್ರಮದ ಕಾರ್ಯದರ್ಶಿಯಾಗಿ, ಪಂಡಿತರಾಗಿ, ನಿರ್ವಾಹಕರಾಗಿ ಸೇವೆ ಸಲ್ಲಿಸಿ 36 ವರ್ಷಗಳ ಬಳಿಕ ಆಶ್ರಮದಿಂದ ನಿವೃತ್ತರಾದರು.

ಆಶ್ರಮದಲ್ಲಿರುವಾಗಲೇ ಜಯಂತಿ, ಆರಾಧನೆ ಏರ್ಪಾಡಿಸುವುದರ ಜತೆಗೆ ಬೆಂಗಳೂರಿನ ಹತ್ತಾರು ಕೇಂದ್ರಗಳಲ್ಲಿ ವೇದಾಂತ ಪ್ರವಚನಗಳನ್ನು ನೀಡುತ್ತಿದ್ದರು. 1988ರಲ್ಲಿ ‘ಶಂಕರಭಾಸ್ಕರ’ ಎಂಬ ವೇದಾಂತ ಪತ್ರಿಕೆ ಪ್ರಾರಂಭಿಸಿದರು. ಅದಕ್ಕೆ 18 ವರ್ಷ ಸಂಪಾದಕರಾಗಿ, ಅದರ ಮೂಲಕ ಶಾಂಕರ ವೇದಾಂತ ಪ್ರಚಾರ ಮಾಡಿದರು. 2001ರಲ್ಲಿ ತಮ್ಮ ಮೊದಲ ಕೃತಿ ‘ಶಾಂಕರ ಸಂವತ್ಸರ’ವನ್ನು ಬರೆದ ಅವರು, ಈವರೆಗೆ 148 ಕೃತಿಗಳನ್ನು ರಚಿಸಿದ್ದಾರೆ. ಸದ್ಯದಲ್ಲೇ ಅವರ 150ನೇ ಕೃತಿ ‘ಏಕಪದಾರ್ಥ ಶ್ಲೋಕ ಸಂಗ್ರಹ’ ಬಿಡುಗಡೆ ಆಗಲಿದೆ.

ಇಷ್ಟು ಪುಸ್ತಕಗಳನ್ನು ರಚಿಸಿದ್ದರೂ, ತಾವು ಬರೆದಿದ್ದು ಶೇ. 1ರಷ್ಟು ಮಾತ್ರ ಎನ್ನುತ್ತಾರೆ ಸುಬ್ರಾಯ ಶರ್ವ. ‘ವೇದಾಂತ ಶಾಸ್ತ್ರ ಎನ್ನುವುದು ಸಾಗರವಿದ್ದಂತೆ. ಬರೆಯಬೇಕಾದ್ದು ಇನ್ನೂ ಸಾಕಷ್ಟಿದೆ. ವೇದಾಂತ ಎಂದರೆ ಕಬ್ಬಿಣದ ಕಡಲೆ, ಅದು ಹಿರಿಯರಿಗೆ ಸೀಮಿತ ಎಂಬ ನಂಬಿಕೆ ಹಲವರಲ್ಲಿ ಇದೆ. ಅದು ತಪು್ಪ ಗ್ರಹಿಕೆ. ಅದೊಂದು ಸುಲಭ ಶಾಸ್ತ್ರ. ಪ್ರತಿಯೊಬ್ಬರೂ ಜೀವನದಲ್ಲಿ ಹೇಗೆ ನೆಮ್ಮದಿ ಕಾಣಬಹುದು ಎಂಬುದನ್ನು ವೇದಾಂತ ಹೇಳಿಕೊಡುತ್ತದೆ. ವೇದಾಂತದಲ್ಲಿ ಎಲ್ಲವೂ ಇದೆ. ಜೀವನ ಕ್ರಮ, ಆಹಾರ ಕ್ರಮ... ಹೀಗೆ. ಅದನ್ನು ಅಳವಡಿಸಿಕೊಂಡರೆ ನೆಮ್ಮದಿಯಿಂದ ಬಾಳಬಹುದು’ ಎನ್ನುತ್ತಾರೆ ಸುಬ್ರಾಯ ಶರ್ವ.

‘ಜ್ಯೋತಿಷ್ಯವು ವೇದಾಂತಕ್ಕೆ ಸಂಬಂಧಿಸಿದ್ದಲ್ಲ. ವೇದಾಂತ ಎನ್ನುವುದು ಶಾಂತಿ ಮತ್ತು ಸಂತೋಷದ ಮಾರ್ಗ. ಯಾವುದೇ ರಾಶಿಯಾದರೂ, ಜಾತಕ ಹೇಗೆ ಇದ್ದರೂ, ತತ್ವಮಸಿ ಮತ್ತು ಅಹಂ ಬ್ರಹ್ಮಾಸ್ಮಿ ಎನ್ನುವುದೇ ವೇದಗಳ ಸಂದೇಶ. ನನಗೆ ಬಹಳಷ್ಟು ಜನ ಜ್ಯೋತಿಷ್ಯ ಹೇಳಿ ಎನ್ನುತ್ತಾರೆ. ಆದರೆ, ನನ್ನ ಉದ್ದೇಶ ಸರಳವಾದ ಭಾಷೆ, ಸುಲಭವಾದ ಶೈಲಿಯಲ್ಲಿ ವೇದಾಂತಗಳ ಬಗ್ಗೆ ಹೇಳುವುದು, ಪ್ರೀತಿ-ವಿಶ್ವಾಸ ಉಂಟು ಮಾಡುವುದು’ ಎನ್ನುತ್ತಾರೆ. ವೇದ-ವೇದಾಂತದಲ್ಲಿ ಹೊಸ ತಲೆಮಾರಿನವರಿಗೆ ಆಸಕ್ತಿಯಿಲ್ಲ ಎಂಬ ಮಾತಿದೆ. ಆದರೆ, ಶರ್ಮಾ ಇದನ್ನು ಒಪ್ಪುವುದಿಲ್ಲ. ಅವರ ಉಪನ್ಯಾಸಗಳಿಗೆ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರಂತೆ. ‘10 ವರ್ಷದ ಮಕ್ಕಳಿಂದ 90 ವರ್ಷದ ಹಿರಿಯರವರೆಗೂ ಹಲವರು ಪ್ರವಚನ, ಉಪನ್ಯಾಸಗಳಿಗೆ ಬರುತ್ತಾರೆ. ಅದರಲ್ಲೂ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಹಲವರು ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರಿಗೆ ಪ್ರವಚನದಿಂದ ಶಾಂತಿ, ಬೆಳಕು ಸಿಗುತ್ತಿದೆ’ ಎನ್ನುತ್ತಾರೆ.

ಆಧ್ಯಾತ್ಮ ವಿದ್ಯಾಪ್ರವೀಣ...

ಸುಬ್ರಾಯ ಶರ್ಮಾ ಅವರಿಗೆ 1978ರಲ್ಲಿ ಹೊಳೆನರಸೀಪುರದ ಆಧ್ಯಾತ್ಮ ವಿದ್ಯಾನಿಲಯವು ‘ಆಧ್ಯಾತ್ಮ ವಿದ್ಯಾಪ್ರವೀಣ’ ಎಂಬ ಬಿರುದನ್ನು ನೀಡಿ ಗೌರವಿಸಿತು. ಅಲ್ಲಿಂದ ಇಲ್ಲಿಯವರೆಗೂ ಹಲವು ಸಂಘ-ಸಂಸ್ಥೆಗಳು ಅವರಿಗೆ ‘ವೇದಾಂತ ಸಾರ್ವಭೌಮ’, ‘ವೇದಾಂತ ರತ್ನಾಕರ’, ‘ವೇದ ವಾರಿಧಿ’ ಮುಂತಾದ ಬಿರುದುಗಳನ್ನು ನೀಡಿ ಗೌರವಿಸಿವೆ. ರಾಜ್ಯ ಪ್ರಶಸ್ತಿಯಲ್ಲದೆ, 2 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿವೆ. 1998ರಲ್ಲಿ ಅವರಿಗೆ 50 ವರ್ಷಗಳಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್​ನಲ್ಲಿ 60 ವಿದ್ವಾಂಸರನ್ನು ಸನ್ಮಾನಿಸಿದ್ದು, ಈ ಸಂದರ್ಭದಲ್ಲಿ ‘ವಿವೇಕ ಭಾಸ್ಕರ’ ಎಂಬ ಅಭಿನಂದನಾ ಗ್ರಂಥ ಹೊರ ತರಲಾಗಿದೆ.

ತಿಂಗಳಿಗೊಂದು ಪುಸ್ತಕ ಪ್ರಕಟಣೆ

‘ಶಾಂಕರ ಸಂವತ್ಸರ’ದಲ್ಲಿ ದಿನಕ್ಕೊಂದರಂತೆ ಇಡೀ ಸಂವತ್ಸರಕ್ಕೆ ಶಾಂಕರಭಾಷ್ಯ ವಾಕ್ಯಗಳು ಮತ್ತು ಅದರ ವಿವರಣೆಯನ್ನು ಕಟ್ಟಿಕೊಟ್ಟಿರುವ ಸುಬ್ರಾಯಶರ್ವ ಅವರು, ತಮ್ಮ 2ನೇ ಗ್ರಂಥವಾದ ‘ವೇದಾಂತ ಸಂವತ್ಸರ’ದಲ್ಲಿ 14 ಉಪನಿಷತ್ತುಗಳಿಂದ ಆರಿಸಿದ 385 ಸಂದೇಶರತ್ನಗಳನ್ನು ಪುಸ್ತಕರೂಪದಲ್ಲಿ ಹೊರತಂದಿದ್ದಾರೆ. ‘ಗೀತಾ ಸಂವತ್ಸರ’ದಲ್ಲಿ ಶ್ರೀಮದ್ಭಗವದ್ಗೀತೆಯಿಂದ ಆರಿಸಿದ 366 ಶ್ಲೋಕಗಳು-ತಾತ್ಪರ್ಯ, ‘ಸುಭಾಷಿತ ಸಂವತ್ಸರ’ದಲ್ಲಿ ದಿನಕ್ಕೊಂದರಂತೆ 366 ಸುಭಾಷಿತ ಶ್ಲೋಕಗಳು, ವಿವರಣೆ, ನೀತಿಗಳನ್ನು ಬರೆದಿದ್ದಾರೆ. 2010ರಿಂದ ತಿಂಗಳಿಗೊಂದು ಪುಸ್ತಕ ಪ್ರಕಟಿಸುತ್ತಿದ್ದಾರೆ. ‘ಕನ್ನಡ ಶಂಕರ’, ‘ನ ಹಿ ಜ್ಞಾನೇನ ಸದೃಶಂ’, ‘ವೇದಾಂತ ಮಕರಂದ’, ‘ಜನ್ಮಾಂತರ’, ‘ಮಹರ್ಷಿಗಳು’, ‘ಬ್ರಹ್ಮಜ್ಞಾನಫಲಂ’, ‘ಅಜ್ಞಾನವಿಮುಕ್ತಿ’, ‘ಮಕ್ಕಳಿಗಾಗಿ ಸ್ತೋತ್ರಗಳು’, ‘ಮಾತೃದೇವೋಭವ’, ‘ದಾನದ ಮಹಿಮೆ’, ‘ಸೂರ್ಯೋಪಾಸನಂ’, ‘ವೇದಾಂತ ಸುಭಾಷಿತಗಳು’, ‘ದಶಾವತಾರಗಳು’, ‘ವಾಕ್ ಸಂಪತ್ತು’, ‘ವಿದ್ಯಾರ್ಥಿಗಳಿಗೆ’, ‘ಭಕ್ತಿಯಿಂದ ಮುಕ್ತಿ’ ಸೇರಿದಂತೆ 148 ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ ಕೆಲವು ಪುಸ್ತಕಗಳು ತೆಲುಗು, ತಮಿಳು, ಉರ್ದು ಸೇರಿದಂತೆ ಹಲವು ಭಾಷೆಗಳಿಗೆ ಅನುವಾದವಾಗಿವೆ.

ವೇದಾಂತವನ್ನು ಮಾರಾಟ ಮಾಡಬಾರದು

1970ರಿಂದ ಇದುವರೆಗೆ ಸುಬ್ರಾಯ ಶರ್ಮಾ 98,500 ಪ್ರವಚನ-ಉಪನ್ಯಾಸ ನೀಡಿದ್ದಾರೆ. 2010ರ ಜ. 4ರಂದು ಒಂದೇ ದಿನ 15 ಪ್ರವಚನಗಳನ್ನು ನೀಡಿದ್ದಾರೆ. ಬೆಂಗಳೂರಿನ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್, ಶಂಕರ ಮಠ, ಭಾಗವತ ಭವನ ಮುಂತಾದ ಕಡೆ ಅವರು ಉಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯದ ಹಲವು ನಗರಗಳಲ್ಲದೆ, ಅಮೆರಿಕಾ, ಜರ್ಮನಿ, ಸಿಂಗಪೂರ್ ಮುಂತಾದ ಕಡೆಗಳಲ್ಲೂ ಪ್ರವಚನ ನೀಡಿದ್ದಾರೆ. ಉಪನ್ಯಾಸಕ್ಕೆ ಅವರು ದರ ನಿಗದಿಪಡಿಸಿಲ್ಲ. ‘ವೇದಾಂತವನ್ನು ಮಾರಾಟ ಮಾಡಬಾರದು. ಏನು ಕೊಟ್ಟರೂ, ಕೊಡದಿದ್ದರೂ ನಾನು ಪ್ರವಚನ ಮಾಡಿದ್ದೇನೆ/ಮಾಡುತ್ತೇನೆ’ ಎನ್ನುತ್ತಾರೆ.

31ರಂದು ಕಾರ್ಯಕ್ರಮ

ಡಿ. 31ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಸವನಗುಡಿ ರಸ್ತೆಯ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಡಾ. ಕೆ.ಜಿ. ಸುಬ್ರಾಯ ಶರ್ಮಾ 75ನೇ ವರ್ಧಂತಿ ಉತ್ಸವ ಆಯೋಜಿಸಲಾಗಿದೆ. ಚಿಂತಕ-ವಾಗ್ಮಿ ಡಾ. ಪಾವಗಡ ಪ್ರಕಾಶರಾವ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಯುವಾ ಬ್ರಿಗೇಡ್ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, ಬಬ್ಬೂರು ಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಡಾ. ಎ.ವಿ. ಪ್ರಸನ್ನ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net