

ಶಿವಮೊಗ್ಗ ಜಿಲ್ಲೆಯ ಸಿಗಂಧೂರು ಸಮೀಪದ ತುಮರಿ ಎಂಬುದು ಕುಗ್ರಾಮ. ಈ ತುಮರಿ ಪ್ರಾಂತ್ಯದಲ್ಲಿ ಕನಿಷ್ಠ ಐನೂರು ಮನೆಗಳಿವೆ. ಶರಾವತಿ ಹಿನ್ನೀರಿನಿಂದ ಮುಳುಗಡೆಯಾದ ಪ್ರದೇಶದಿಂದಾಗಿ ಇಲ್ಲಿಗೆ ನೀರು ದಾಟಿ ತೆರಳಲು ಬಾರ್ಜ್ ವ್ಯವಸ್ಥೆಯಿದೆ. ಸಂಜೆ ಆರು ಗಂಟೆಯ ನಂತರ ಅಲ್ಲಿರುವವರು ಹೊರಗೆ ಹೋಗಬೇಕಾದರೆ ಅಥವಾ ಹೊರಗಿನಿಂದ ಯಾರಾದರೂ ಗ್ರಾಮ ಪ್ರವೇಶಿಸಬೇಕಾದರೆ ಆ ಬಾರ್ಜೂ ಇಲ್ಲ. ಗ್ರಾಮದಲ್ಲಿ ಒಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರವಿದೆ. ಅಲ್ಲಿ ವೈದ್ಯರು ಬಂದರೆ ಮಾತ್ರ ಚಿಕಿತ್ಸೆ, ಹಗಲು ಹೊತ್ತಿನಲ್ಲಿ ಮಾತ್ರ ಈ ಸೌಲಭ್ಯ. ಅದೂ ವೈದ್ಯರು ರಜೆ ಹಾಕದೆ ಕರ್ತವ್ಯಕ್ಕೆ ಹಾಜರಾದ ದಿನ ಮಾತ್ರ! ಆಸ್ಪತ್ರೆ ಬಿಡಿ, ದೊಡ್ಡ ಹೋಟೆಲ್ಗಳೂ ಇಲ್ಲ. ಕನಿಷ್ಠ 75 ಕಿಲೋ ಮೀಟರ್ ಕ್ರಮಿಸಿ ಸಾಗರ ತಲುಪಿ ವೈದ್ಯಕೀಯ ವ್ಯವಸ್ಥೆ ಪಡೆಯಬಹುದು. ರಾತ್ರಿ ಯಾರಿಗಾದರೂ ಆರೋಗ್ಯದ ತೊಂದರೆಯಾದರೆ ಯಾರು ಗತಿ? ಪರಿಸ್ಥಿತಿ ಹೀಗಿದ್ದರೂ ಅಲ್ಲಿನ ಜನ ನೆಮ್ಮದಿಯಿಂದ ನಿದ್ರೆ ಮಾಡುತ್ತಾರೆ, ಸಂತೃಪ್ತ ಬದುಕನ್ನು ಮುನ್ನಡೆಸುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳ ಸಮೂಹದ ಮಧ್ಯೆಯೇ ದಿನಕಳೆಯುತ್ತಿರುವವರಿಗೆ ಇಷ್ಟೊಂದು ಆರೋಗ್ಯ ನೆಮ್ಮದಿ ಇದೆಯೇ ಎಂಬುದು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಯಶಸ್ವೀ ಚಿಕಿತ್ಸೆ, ಉತ್ಕೃಷ್ಠ ಚಿಕಿತ್ಸೆ ಎಂಬುದು ಅಷ್ಟೊಂದು ಸುಲಭದಲ್ಲಿ ವ್ಯಾಖ್ಯಾನ ಮಾಡಲು ಸಾಧ್ಯವಿರುವ ವಿಚಾರವಲ್ಲ. ಫಲಪ್ರದ ಚಿಕಿತ್ಸೆಗೆ ಸಾವಿರಾರು ಮುಖಗಳಿವೆ.
ಚಿಕಿತ್ಸೆಯು ಸರ್ವಾಂಗೀಣವಾಗಿ ಯೋಜಿಸಲ್ಪಟ್ಟು ಯಶಸ್ವಿ ಎನಿಸಿಕೊಳ್ಳಬೇಕಾದರೆ ವೈದ್ಯರ ಪ್ರಯತ್ನ, ರೋಗಿಯ ಪ್ರಯತ್ನ ಎರಡೂ ನ್ಯೂನತೆಗಳಿಲ್ಲದೆ ಪರಿಪೂರ್ಣವಾಗಿರಲೇಬೇಕು. ಮನಸ್ಸಿನಲ್ಲಿ ಯೋಚಿಸಿದ ಮಾತ್ರಕ್ಕೆ ಅಭೀಷ್ಟಗಳೆಲ್ಲ ಸಿದ್ಧಿಯಾಗುವುದಿಲ್ಲ. ಫಲ ಸಿಗಬೇಕಾದರೆ ಅದಕ್ಕೆ ತಕ್ಕುದಾದ ಪ್ರಯತ್ನಗಳಿರಬೇಕು. ನಿದ್ರಿಸುತ್ತಿರುವ ಸಿಂಹದ ಬಾಯಿಗೆ ಅದರ ಆಹಾರವಾದ ಮೃಗಗಳು ತನ್ನಿಂದ ತಾನೇ ಬಂದು ಬೀಳುವುದಿಲ್ಲ. ವನರಾಜನಾದರೇನು, ಆಹಾರ ಪ್ರಾಪ್ತಿಗೆ ಸಿಂಹದ ಸ್ವಪ್ರಯತ್ನ ಇರಲೇಬೇಕು ಎಂಬ ಸುಭಾಷಿತದ ಮಾತೂ ಇಲ್ಲಿ ಗಮನೀಯ. ಚಿಕಿತ್ಸೆಗೆ ಹಿತ, ಪಥ್ಯ, ಪ್ರಾಯಶ್ಚಿತ್ತ, ಭಿಷಗ್ಜಿತ, ಭೇಷಜ, ಶಮನ, ಶಸ್ತ, ಪ್ರಕೃತಿಸ್ಥಾಪನ, ಔಷಧ, ವ್ಯಾಧಿಹರ, ಸಾಧನ ಎಂಬ ಹಲವಾರು ಸಮಾನಾರ್ಥಕ ಪದಗಳನ್ನು ಆಯುರ್ವೆದ ಹೇಳಿದೆ. ಇಂತಹ ಚಿಕಿತ್ಸೆ ನೀಡುವುದರಿಂದ ಕೆಲವೊಮ್ಮೆ ಧರ್ಮ ಅರ್ಜನೆ ಆಗುತ್ತದೆ. ಕೆಲವು ಸಂದರ್ಭಗಳಲ್ಲಿ ಗೆಳೆತನ ಪ್ರಾಪ್ತಿಯಾಗುತ್ತದೆ, ಮತ್ತೆ ಕೆಲವೊಮ್ಮೆ ಧನವನ್ನು ತಂದು ಕೊಡುತ್ತದೆ, ಕೆಲವು ಬಾರಿ ಯಶಸ್ಸು, ಗೌರವಗಳನ್ನು ನೀಡುತ್ತದೆ. ಜತೆಗೆ ಚಿಕಿತ್ಸೆಯ ಅಭ್ಯಾಸ, ಅನುಭವ, ಪರಿಣತಿಗಳನ್ನಂತೂ ನೀಡಿಯೇ ನೀಡುತ್ತದೆ. ಆದುದರಿಂದ ಚಿಕಿತ್ಸೆ ಎಂದೂ ನಿಷ್ಪಲ ಆಗುವುದಿಲ್ಲ ಎಂಬ ಆಯುರ್ವೆದ ಸುಭಾಷಿತವು ಮಾರ್ವಿುಕವಾಗಿದೆ.