SUCCESS STORY | 8ನೇ ಪ್ರಯತ್ನದಲ್ಲಿ UPSC ಪರೀಕ್ಷೆ ತೇರ್ಗಡೆಯಾದ ಹೆಡ್​ ಕಾನ್ಸ್​ಸ್ಟೇಬಲ್!

Ram Bhajan Kumar
Published on

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) 2022ನೇ ಸಾಲಿನ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶ ಮೇ23 ಬಿಡುಗಡೆಯಾಗಿದ್ದು, 933 ಮಂದಿ ಉತೀರ್ಣರಾಗಿದ್ದಾರೆ. ದೆಹಲಿಯ ಹೆಡ್ ಕಾನ್​​ಸ್ಟೇಬಲ್ ರಾಮ್ ಭಜನ್ ಕುಮಾರ್ ಎಂಬುವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, 667ನೇ ರ್ಯಾಂಕ್ ಗಳಿಸಿದ್ದಾರೆ. 

34 ವರ್ಷದ ರಾಮ್ ಭಜನ್ ಕುಮಾರ್ ಸೈಬರ್ ಸೆಲ್ ಠಾಣೆಯಲ್ಲಿ ಹೆಡ್ ಕಾನ್​ಸ್ಟೇಬಲ್ ಆಗಿದ್ದು, ಎಂಟನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಬಹುದಿನಗಳ ಕನಸು ನನಸಾಗಿದೆ. ಒಬಿಸಿ ವರ್ಗಕ್ಕೆ ಸೇರಿರುವ ಕಾರಣ, 9 ಪ್ರಯತ್ನಗಳಿಗೆ ಅರ್ಹನಾಗಿದ್ದೆ. ಇದೀಗ ಎಂಟನೇ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದು, ಈ ಬಾರಿಯೂ ವಿಫಲನಾಗಿದ್ದರೆ 9ನೇ ಪ್ರಯತ್ನ ಸಿದ್ಧತೆ ನಡೆಸಲು ಪ್ರಾರಂಭಿಸುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ.

ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ಹೆತ್ತವರಿಂದ, ಕುಟುಂಬಸ್ಥರಿಂದ, ಇಲಾಖೆಯ ಹಿರಿಯ ಅಧಿಕಾರಿಗಳು ಕರೆ ಮಾಡಿ ಹಾರೈಸಿದರು. ಕಳೆದೆ ಎರಡು ವರ್ಷಗಳಿಂದ ಸತತ ವೈಫಲ್ಯ ಅನುಭವಿಸಿದ್ದೆ. ಈ ವೇಳೆ ಪತ್ನಿ ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಳು. ನನಗೆ ಶಕ್ತಿಯಾಗಿ ನಿಂತುಕೊಂಡಳು ಎಂದು ರಾಮ್ ಭಜನ್ ಕುಮಾರ್ ಹೇಳಿಕೊಂಡಿದ್ದಾರೆ.

2009 ರಲ್ಲಿ ಕಾನ್ಸ್‌ಟೇಬಲ್ ಆಗಿ ಇಲಾಖೆ ಸೇರಿದ ರಾಮ್ ಭಜನ್ ಕುಮಾರ್, ವಿವಿಧೆಡೆ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಷ್ಟ ಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ಕಂಡ ಇಲಾಖೆಯ ಹಿರಿಯ ಅಧಿಕಾರಿಗಳು ಸದಾ ಪ್ರೋತ್ಸಾಹಿಸುತ್ತಾ ಬಂದರು. ಆರಂಭದಲ್ಲಿ ಪ್ರತಿದಿನ ಕನಿಷ್ಠ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದ. ಪರೀಕ್ಷೆಯ ದಿನಾಂಕ ಹತ್ತಿರ ಬಂದಾಗ, ಪ್ರತಿದಿನ ಸುಮಾರು 16 ಗಂಟೆಗಳ ಕಾಲ ಸಿದ್ಧತೆಗಾಗಿ ಮೀಸಲಿಡುತ್ತಿದ್ದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net